‘ಗೃಹಲಕ್ಷ್ಮೀ ಯೋಜನೆ’ ಉದ್ಘಾಟನೆಗೆ ರಾಹುಲ್ ಗಾಂಧಿ ಆಗಮನ; ಸೋನಿಯಾ ಗಾಂಧಿ ಅವರಿಗೂ ಆಹ್ವಾನ

Update: 2023-08-11 16:04 GMT

ಬೆಳಗಾವಿ, ಆ. 11: ‘ತಿಂಗಳ ಅಂತ್ಯದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ‘ಗೃಹಲಕ್ಷ್ಮೀ ಯೋಜನೆ’ ಉದ್ಘಾಟನೆಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿಕಾರ್ಯಕ್ರಮ ನಡೆಯಲಿರುವ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಕಾರ್ಯಕ್ರಮಕ್ಕೆ ಈ ಜಾಗ ಗುರುತಿಸಲಾಗಿದೆ. ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರಿಗೂ ಆಹ್ವಾನ ನೀಡಿದ್ದೇವೆ. ಒಂದು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

‘ಒಂದೊಂದು ಕಂದಾಯ ವಿಭಾಗದಲ್ಲಿ ಒಂದೊಂದು ಗ್ಯಾರಂಟಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ‘ಶಕ್ತಿ’ ಯೋಜನೆ, ಕಲಬುರ್ಗಿಯಲ್ಲಿ ‘ಗೃಹ ಜ್ಯೋತಿ’, ಮೈಸೂರಿನಲ್ಲಿ ‘ಅನ್ನಭಾಗ್ಯ’ ಯೋಜನೆ, ಈಗ ಬೆಳಗಾವಿಯಲ್ಲಿ ‘ಗೃಹಲಕ್ಷ್ಮೀ’ ಯೋಜನೆಗೆ ಚಾಲನೆ ನೀಡಲಾಗುವುದು. ಯುವನಿಧಿ ಯೋಜನೆಯನ್ನು ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಲು ಅರ್ಹರಿರುವ 1 ಕೋಟಿ 33 ಲಕ್ಷ ಕುಟುಂಬಗಳ ಪೈಕಿ ಈಗಾಗಲೇ 1 ಕೋಟಿ 6 ಲಕ್ಷ ನೊಂದಣಿಯಾಗಿದೆ. ಬಡವರು, ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಮಾಡಬೇಕಾದ ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ಆಸೀಫ್ ಸೇಠ್ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News