ವಾಡಿಕೆಗಿಂತ ಹೆಚ್ಚು ಮಳೆ : ಕೃಷಿ ಸಿದ್ಧತೆಗೆ ಹವಾಮಾನ ಇಲಾಖೆ ಸೂಚನೆ

Update: 2024-04-22 15:35 GMT

ಬೆಂಗಳೂರು: ಈ ವರ್ಷದ ಮುಂಗಾರು ಅವಧಿಯಲ್ಲಿ ದೀರ್ಘಾವಧಿ (1971 ರಿಂದ 2020) ಸರಾಸರಿ ಮಳೆ (87 ಸೆಂ.ಮೀ.)  ಪ್ರಮಾಣದಲ್ಲಿ ಶೇ.6ರಷ್ಟು ಹೆಚ್ಚಳದೊಂದಿಗೆ ವಾಡಿಕೆಯ ಶೇ.106 ರಷ್ಟು ಮಳೆಯಾಗುವ ಸಾದ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ 2024ರ ಮುಂಗಾರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ. ಈ ನಿಟ್ಟಿನಲ್ಲಿ, ಕೃಷಿ ಉತ್ಪಾದನೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಪ್ರಮುಖವಾದ ಎಪ್ರಿಲ್ ಕೊನೆ ಹಾಗೂ ಮೇ ತಿಂಗಳಲ್ಲಿ ಮಳೆ ಮುನ್ಸೂಚನೆಯಿರುವುದರಿಂದ ಮಾಗಿ ಉಳುಮೆ ಕೈಗೊಂಡು ಮಣ್ಣು ಮತ್ತು ನೀರು ಸಂರಕ್ಷಣೆಗೆ ಒತ್ತು ನೀಡಬೇಕು.

ಮಳೆನೀರಿನ ಸಂರಕ್ಷಣೆಗೆ ಬದು ಹಾಗೂ ಕೃಷಿ ಹೊಂಡಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು. ಎರಡನೇ ಅಥವಾ ಮೂರನೇ ಮಳೆ ನಂತರ, ಭೂಮಿ ಹದಗೊಳಿಸಿ ಹಸಿರೆಲೆ ಗೊಬ್ಬರಗಳಾದ ಅಪ್‍ಸೆಣಬು, ಚಂಬೆ, ಹುರುಳಿಯನ್ನು 45-60 ದಿನಗಳಲ್ಲಿ ಹಸಿರೆಲೆ ಗೊಬ್ಬರವಾಗಿ ಅಥವಾ ಹಸಿಕಾಯಿಗೆ ಸೂಕ್ತ ದ್ವಿದಳ ಬೆಳೆಗಳಾದ ಅವರೆ, ಅಲಸಂಧೆಯನ್ನು ಬಿತ್ತಿ ಹಸಿಕಾಯಿ ಕಿತ್ತ ನಂತರ ಸೊಪ್ಪನ್ನು ಭೂಮಿಗೆ ಸೇರಿಸುವುದು. ಇದರಿಂದ ಮಣ್ಣಿನ ಫಲವತ್ತೆತೆ ಹೆಚ್ಚುವುದಲ್ಲದೆ, ಮಣ್ಣಿನಲ್ಲಿ ತೇವಾಂಶವನ್ನು ಹೆಚ್ಚಿನ ಕಾಲ ಸಂಗ್ರಹಿಸಲು ಸಾಧ್ಯವಾಗುತ್ತದೆ.

ಕಳೆದ ಬಾರಿಯ ಮಳೆ ಕೊರತೆ ಹಾಗೂ ಕುಸಿದಿರುವ ಅಂತರ್ಜಲ ಮಟ್ಟದಿಂದ, ಈ ಬಾರಿ ಮಣ್ಣಿನಲ್ಲಿ ತೇವಾಂಶದ ಕೊರತೆಯಿದ್ದು, ಕೆರೆಕಟ್ಟೆ ಹಾಗೂ ಅಣೆಕಟ್ಟುಗಳಿಗೆ ನೀರಿನ ಆಗಮನ ವಿಳಂಬವಾಗುವ ಸಾಧ್ಯತೆಯಿದ್ದು, ಈ ಪ್ರದೇಶದಲ್ಲಿ ಬೆಳೆಗಳ ಮಧ್ಯಮವಧಿ ಹಾಗೂ ಅಲ್ಫಾವಧಿ ತಳಿಗಳ ಬಿತ್ತನೆಗೆ ಅವಶ್ಯ ಬಿತ್ತನೆಬೀಜ ಸಿದ್ಧಪಡಿಸಿಕೊಳ್ಳಬೇಕು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News