ಮುಖ್ಯಮಂತ್ರಿ ಸಿದ್ದರಾಮಯ್ಯರ ತೇಜೋವಧೆ ವಿರೋಧಿಸಿ ಆ.7ರಂದು ರಾಜಭವನ ಚಲೋ

Update: 2024-08-02 18:13 GMT

ಬೆಂಗಳೂರು: ಶೋಷಿತ ಸಮುದಾಯಗಳ ಜನನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯರ ತೇಜೋವಧೆ ಹಾಗೂ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಆ.7ರಂದು ನಗರದಲ್ಲಿ ‘ರಾಜಭವನ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ತಿಳಿಸಿದೆ.

ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ, ಇತ್ತಿಚೆಗೆ ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ಖುರ್ಚಿ ಆಸೆಗಾಗಿ ಜನಪರ ಇರುವ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡಮಟ್ಟದ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಶಾಶ್ವತವಾಗಿ ಹಿಂದುಳಿದ ವರ್ಗಗಳನ್ನು ಅಧಿಕಾರದಿಂದ ದೂರ ಇಡಬಹುದು. ಹೀಗಾಗಿ ಸಿದ್ದರಾಮಯ್ಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸಕಲ ಹಿಂದುಳಿದ ವರ್ಗಗಳು ಅಧಿಕಾರ ನಡೆಸಲು ಅಸಮರ್ಥ ಎಂದು ಬಿಂಬಿಸಬಹುದು ಎನ್ನುವ ಹುನ್ನಾರದಿಂದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮತ್ತು ವಾಲ್ಮೀಕಿ ನಿಗಮದ ವಿವಾದದಲ್ಲಿ ಅವರ ಹೆಸರನ್ನು ತಳಕು ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು.

ರಾಜ್ಯಪಾಲರ ಮುಖಾಂತರ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಅಸ್ತಿರಗೊಳಿಸಲು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ. ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ತಕ್ಕ ಪಾಠವನ್ನು ನಿರ್ಧರಿಸಿದ್ದೇವೆ. ಸಿದ್ದರಾಮಯ್ಯರವರನ್ನು ದುರ್ಬಲ ಗೊಳಿಸುವ ಕುತಂತ್ರವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಆ.5ರಂದು ಎಲ್ಲಾ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ. ಆ.7 ರಾಜಭವನ ಚಲೋ ಮಾಡಲಾಗುತ್ತದೆ. ಪ್ರತಿಭಟನೆ ಹೋರಾಟದಲ್ಲಿ ನಾಡಿನ ಶೋಷಿತ ಸಮುದಾಯಗಳು, ದಲಿತ, ಹಿಂದುಳಿದ ಸಮುದಾಯ, ಭಾಗವಹಿಸಲು ಕೋರಲಾಗಿದೆ. ಜನಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News