ಶೋಷಿತ ವರ್ಗಗಳಿಂದ ‘ರಾಜಭವನ ಚಲೋ’ ಪ್ರತಿಭಟನೆ

Update: 2024-08-27 13:51 GMT

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದು, ರಾಷ್ಟ್ರಪತಿ ಈ ಕೂಡಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ವಾಪಸ್ಸು ಕರೆಸಿಕೊಳ್ಳಬೇಕೆಂದು ಅಹಿಂದ ನಾಯಕರು ಒಕ್ಕೂರಲಿನಿಂದ ಕರೆ ನೀಡಿದ್ದಾರೆ.

ಮಂಗಳವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ‘ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ’ ನೇತೃತ್ವದಲ್ಲಿ ಜಮಾಯಿಸಿದ ಅಹಿಂದ ಸಮುದಾಯದ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ, ಕೇಂದ್ರ ಸರಕಾರ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡುವಾಗ ಸಂವಿಧಾನದ ಮೂಲ ತತ್ವಗಳನ್ನು ಗಾಳಿಗೆ ತೂರಿದ್ದಾರೆ. ರಾಜಭವನವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಅಲ್ಲದೆ, ರಾಜ್ಯಪಾಲರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಇಂತಹ ರಾಜ್ಯಪಾಲರನ್ನು, ರಾಷ್ಟ್ರಪತಿಗಳು ವಾಪಸ್ಸು ಕರೆಸಿಕೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಸಂವಿಧಾನ ತಜ್ಞ ಪ್ರೊ. ರವಿವರ್ಮ ಕುಮಾರ್, ‘ರಾಜ್ಯಪಾಲರು 17 ‘ಎ’ ಅಡಿಯಲ್ಲಿ ಪೂರ್ವಾನುಮತಿ ಕೊಡಲು ಅವಕಾಶ ಇಲ್ಲ. ಅದರಲ್ಲೂ ಜಮೀನು ಖರೀದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವೂ ಇಲ್ಲ. ಯಾವ ಆದೇಶ ಪತ್ರವನ್ನು ಅವರು ನೀಡಿಲ್ಲ ಎಂದು ಹೇಳಿದರು.

ರಾಜ್ಯಪಾಲರ ಕೈಗೆ ದೂರು ಬಂದ ಕೂಡಲೇ ನೋಟಿಸ್ ಕೊಡಲಾಗಿದೆ. ಸರಿ-ತಪ್ಪು ಯೋಚನೆ ಮಾಡದೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದಲೇ ರಾಜ್ಯಪಾಲರ ನಡೆ ಏನೆಂದು ಗೊತ್ತಾಗಿದ್ದು, ಅವರು ಕಾನೂನು ವಿದ್ಯಾರ್ಥಿಯ ಸಲಹೆಯನ್ನು ಪಡೆಯಬಹುದಾಗಿತ್ತು ಎಂದು ಅವರು ವ್ಯಂಗ್ಯವಾಡಿದರು.

ದಲಿತ ಮುಖಂಡ ಮಾವಳ್ಳಿ ಶಂಕರ್, ‘ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ವಿರುದ್ಧ ಪಡೆಯುತ್ತಿರುವ ಪಿತೂರಿ ಭಾಗವಾಗಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಒಂದು ಸ್ಥಿರ ಸರಕಾರವನ್ನು ವಾಮ ಮಾರ್ಗದಿಂದ ಕೆಡವಿ, ಮಜಾ ತೆಗೆದುಕೊಳ್ಳಲು ಹೊರಟಿರುವ ಜೆಡಿಎಸ್-ಬಿಜೆಪಿ ಪಕ್ಷಗಳು, ಇದಕ್ಕೆ ರಾಜಭವನವನ್ನ ದುರುಪಯೋಗ ಪಡಿಸಿಕೊಂಡಿವೆ’ ಎಂದು ಆಪಾದಿಸಿದರು.

ಸಿದ್ದರಾಮಯ್ಯ ಒಂಟಿ ಅಲ್ಲ, ಅವರ ಪರವಾಗಿ ನಾವೆಲ್ಲಾ ಇದ್ದೇವೆ. ರಾಜ್ಯಪಾಲರನ್ನು ಬಳಸಿಕೊಂಡು ಸಿದ್ದರಾಮಯ್ಯ ವಿರುದ್ಧ ಸಂಚು ನಡೆಯುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಒಂದುಗೂಡಿ ಒಂದು ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತಿದ್ದಾರೆ. ಇದನ್ನು ರಾಜ್ಯಪಾಲರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ನ್ಯಾಯವಾದಿ ಅನಂತ್ ನಾಯ್ಕ್ ಮಾತನಾಡಿ, ‘ಶೋಷಷಿತ ಸಮುದಾಯಗಳ ಆಶಾಕಿರಣವಾಗಿರುವ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರೆಯಬೇಕು. ಅದರಲ್ಲೂ, ನೇರವಾಗಿ ಜನಾಧಿಕಾರ ಪಡೆಯಲು ಸಾಧ್ಯವಾಗದ ಜೆಡಿಎಸ್-ಬಿಜೆಪಿ ಪಕ್ಷಗಳು ಹಿಂಬಾಗಿಲ ಮೂಲಕ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿವೆ.ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ’ ಎಂದರು.

ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ಮಾತನಾಡಿ, ‘ಮುಡಾ ಹಗರಣದಲ್ಲಿ ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರದ್ದು ಯಾವುದೇ ತಪ್ಪಿಲ್ಲದಿದ್ದರೂ ಅವರನ್ನು ವಿನಾಕಾರಣ ಹಗರಣದಲ್ಲಿ ಸಿಲುಕಿಸಲು ಜೆಡಿಎಸ್ ಪ್ರಯತ್ನಿಸುತ್ತಿದೆ. ಸ್ವತಃ ಮುಖ್ಯಮಂತ್ರಿಗಳೇ ತನ್ನ ಮೇಲೆ ಬಂದಿರುವ ಹಗರಣದ ತನಿಖೆಗೆ ನಿವೃತ್ತ ನ್ಯಾಯಾಮೂರ್ತಿ ಪಿ.ಎನ್.ದೇಸಾಯಿ ಅವರನ್ನು ನೇಮಕ ಮಾಡಿದ್ದರೂ ಅವರಿಗೆ ತಮಲ್ಲಿರುವ ದಾಖಲೆ ಸಲ್ಲಿಸಿಲ್ಲ ಎಂದು ಆರೋಪಿಸಿದರು.

ತಮ್ಮ ಕುಟುಂಬದ ಮೇಲಾಗಿರುವ ಹೊಲಸು ಸರಿ ಮಾಡಿಕೊಳ್ಳಲಾಗದೆ ಎಚ್.ಡಿ.ಕುಮಾರಸ್ವಾಮಿ, ಕ್ಲೀನ್ ಇಮೆಜ್ ಇರುವ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಸಿದ್ದರಾಮಯ್ಯ ಅವರ ದ್ವನಿಯಾಗಿ ಇಡೀ ತಳ ಸಮುದಾಯದ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪರಿಷತ್ತಿನ ಸದಸ್ಯರಾದ ಅಬ್ದುಲ್ ಝಬ್ಬಾರ್, ನಾಗರಾಜ್ ಯಾದವ್, ಕಾಂಗ್ರೆಸ್ ಮುಖಂಡರಾದ ಜಿ.ಎ.ಬಾವಾ ಸೇರಿದಂತೆ ವಿವಿಧ ಸಂಘಟನೆಗಳು ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್: ರಾಜ್ಯಪಾಲರ ನಡೆ ವಿರೋಧಿಸಿ ಅಹಿಂದ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್, ರೈಲ್ವೇ ನಿಲ್ದಾಣ ಹಾಗೂ ರಾಜಭವನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು.

ಸಂಚಾರ ಮಾರ್ಗ ಬದಲಾವಣೆ: ರಾಜಭವನ ಚಲೋ ಹಿನ್ನೆಲೆಯಲ್ಲಿ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಮೈಸೂರು, ತುಮಕೂರು, ಕನಕಪುರ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆಗಳ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬಂದ ಹಿನ್ನೆಲೆ ಅಲ್ಲಲ್ಲಿ ಸಂಚಾರ ದಟ್ಟಣೆ ಕಂಡಿತು. ಇನ್ನೂ, ಈ ರಸ್ತೆಯನ್ನು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಪರ್ಯಾಯ ರಸ್ತೆ ಬಳಕೆ ಮಾಡಲು ಸಂಚಾರ ಪೊಲೀಸರು ಸೂಚಿಸಿದ್ದರು.

ರಾಜಭವನ ಮುತ್ತಿಗೆ, ಹಲವರು ವಶಕ್ಕೆ: ಪ್ರತಿಭಟನೆ ಬಳಿಕ ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.ಇದೇ ವೇಳೆ ಅಹಿಂದ ಸಮುದಾಯದ ನಾಯಕರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಪೋಸ್ಟರ್ ಮೂಲಕ ಆಗ್ರಹಿಸಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News