ರಾಜ್ಯಸಭಾ ಚುನಾವಣೆ | ಬೇರೆ ಪಕ್ಷದ ಶಾಸಕರೂ ನಮ್ಮ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ನಿರೀಕ್ಷೆ ಇದೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬೇರೆ ಪಕ್ಷದ ಶಾಸಕರೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ನಿರೀಕ್ಷೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನ ಚುನಾವಣೆ ನಡೆಯುತ್ತಿರುವ ಹಿನ್ನಲೆ ಮತ ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ನಾಲ್ಕು ಶಾಸಕರ ಮತಗಳು ನಮ್ಮ ಅಭ್ಯರ್ಥಿಗಳಿಗೆ ಬೀಳಲಿದೆ. ಅಲ್ಲದೆ ನಮ್ಮ ಅಭ್ಯರ್ಥಿಗಳು ಸುಲಭವಾಗಿ ಜಯಗಳಿಸುತ್ತಾರೆ' ಎಂದು ಹೇಳಿದರು.
'ಕಾಂಗ್ರೆಸ್ ಪಕ್ಷದ 134 ಶಾಸಕರ ಜೊತೆಗೆ ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ, ಕೆ.ಎಚ್. ಪುಟ್ಟಸ್ವಾಮಿ ಗೌಡ, ದರ್ಶನ್ ಪುಟ್ಟಣ್ಣಯ್ಯ ಮತ್ತು ಜನಾರ್ದನ ರೆಡ್ಡಿ ಅವರು ಕೂಡ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಲಿದ್ದಾರೆ. ಅಲ್ಲದೆ ಮೂರೂ ಅಭ್ಯರ್ಥಿಗಳ ಗೆಲುವಿಗೆ ಬೇಕಾಗುವಷ್ಟು ಮತಗಳು ನಮ್ಮ ಬಳಿ ಇವೆ' ಎಂದು ತಿಳಿಸಿದರು.
ʼಜೆಡಿಎಸ್ ಗೆ ಇರುವುದೇ 19 ಮಂದಿ ಶಾಸಕರು. ಹೀಗಿರುವಾಗ ಅವರು ಅಭ್ಯರ್ಥಿಯನ್ನು ಹಾಕಬಾರದಿತ್ತು. ಅದ್ದರಿಂದ ನಾವು ಹೋಟೆಲ್ ಗೆ ಹೋಗಿ ಒಟ್ಟಾಗಿ ಮತದಾನಕ್ಕೆ ಬರಬೇಕಾಯಿತು' ಎಂದು ನುಡಿದರು.
ಆತ್ಮ ಸಾಕ್ಷಿಯ ಮತಗಳು ಬರಲಿವೆ ಎಂಬ ಜೆಡಿಎಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಜೆಡಿಎಸ್ ಪಕ್ಷದವರಿಗೆ ಆತ್ಮವೂ ಇಲ್ಲ, ಸಾಕ್ಷಿಯೂ ಇಲ್ಲ' ಎಂದು ವ್ಯಂಗ್ಯವಾಡಿದರು.
ಶಾಸಕರಿಗೆ ಆಮಿಷ
ಜೆಡಿಎಸ್ ನವರಿಗೆ ಮತವಿಲ್ಲದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿ , ಬೇರೆ ಪಕ್ಷದ ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಬೆದರಿಕೆ ಹಾಕಿರುವುದಕ್ಕೆ ಎನ್ಡಿಎ ಅಭ್ಯರ್ಥಿ ವಿರುದ್ಧ ಎಫ್.ಐ.ಆರ್ ಹಾಕಲಾಗಿದೆ ಎಂದರು.