ರಾಜ್ಯೋತ್ಸವ ಪ್ರಶಸ್ತಿ | ಮಲಹೊರುವವರ ʼಯೋಗ್ಯತೆʼ ಪ್ರಶ್ನೆ ; ಆಯ್ಕೆ ಸಮಿತಿ ಸದಸ್ಯ ನಾಗೇಶ ಹೆಗಡೆ ಬರಹಕ್ಕೆ ಆಕ್ರೋಶ
ಬೆಂಗಳೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿದ್ದ ಹಿರಿಯ ಲೇಖಕ ನಾಗೇಶ ಹೆಗಡೆಯವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ವಿವಾದದ ಸ್ವರೂಪ ಪಡೆದುಕೊಂಡಿದೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಾಗೇಶ ಹೆಗಡೆಯವರು ಪ್ರಶಸ್ತಿ ಆಯ್ಕೆ ಮಾಡುವಾಗ ಎದುರಾಗಿದ್ದ ಸವಾಲುಗಳ ಕುರಿತು ಧೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ಅವರು ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಮಲಹೊರುವವರಿಗೆ ಪ್ರಶಸ್ತಿ ಕೊಡುವ ಬಗ್ಗೆ ಬಂದ ಸಲಹೆಯ ಕುರಿತು ಬರೆದಿದ್ದರು.
“ಮಲ ಹೊರುವ ಶ್ರಮಿಕರಿಗೆ ವಯಸ್ಸಿನ ನಿರ್ಬಂಧ ಇರಲೇಬಾರದು, ಅವರಲ್ಲಿ 50 ವರ್ಷದಾಚೆ ಬದುಕುವುದೇ ಅಪರೂಪ; ಅಂಥವರಲ್ಲಿ ಯೋಗ್ಯರಾದ ಒಬ್ಬರಿಗೆ ಪ್ರಶಸ್ತಿ ಕೊಡಬೇಕು ಎಂಬ ಒತ್ತಾಯವೂ ಈ ವರ್ಷ ಬಂತು. ಕೊಡಬೇಕು ಸರಿ; ಆದರೆ ಅವರಲ್ಲಿ ಯೋಗ್ಯತೆಯ ಮಾನದಂಡ ಏನು? ನನ್ನ ಪ್ರಕಾರ, ಯಾರು 60 ಮೀರಿಯೂ ಬದುಕಿರುತ್ತಾರೊ (ಕುಡಿತ, ಅನಾರೋಗ್ಯವನ್ನೂ ಮೆಟ್ಟಿ ನಿಂತ) ಅಂಥವರನ್ನೇ ಹುಡುಕಿ ಪ್ರಶಸ್ತಿ ಕೊಡಬೇಕು ತಾನೆ?” ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದರು.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಇನ್ನೊಬ್ಬ ಸದಸ್ಯ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ ಎಸ್ ದ್ವಾರಕನಾಥ್ ಅವರು ನಾಗೇಶ ಹೆಗಡೆಯವರ ಬರಹಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
“ಈ ವಿಷಯ ಪ್ರಸ್ತಾಪಿಸಿದ್ದು ಆಯ್ಕೆ ಸಮಿತಿಯಲ್ಲಿದ್ದ ನಾನೇ. ಬೀದಿ ಗುಡಿಸುವ ಶಂಕ್ರಮ್ಮ ಮತ್ತು ಕಕ್ಕಸು ಗುಂಡಿಗೆ ಇಳಿಯುವ ರಂಗಸ್ವಾಮಿ ಇಬ್ಬರಿಗೂ ಅರವತ್ತು ವರ್ಷ ತುಂಬಿದ್ದು ಈ ಇಬ್ಬರಿಗೂ ಕುಡಿಯುವ ಚಟ ಇದೆಯೋ ಇಲ್ಲವೋ ಅನ್ನುವುದು ನನಗೆ ಮುಖ್ಯವಲ್ಲ, "ಕಕ್ಕಸ್ಸು ಗುಂಡಿಗೆ ಇಳಿದು ಮಲ ಬಾಚುವವರು ಕುಡಿಯದೇ ವೃತ್ತಿ ಮಾಡಲು ಹೇಗೆ ಸಾದ್ಯ?" ಎನ್ನುವುದು ಇವರ ಬದುಕಿನ ಬಗ್ಗೆ ಕನಿಷ್ಟ ಅರಿವಿಲ್ಲದವರಿಗೆ ಅರ್ಥವಾಗಲ್ಲ. ಕಡೆಗೂ ಈ ನತದೃಷ್ಟರಿಬ್ಬರಿಗೂ ಪ್ರಶಸ್ತಿ ಸಿಗಲಿಲ್ಲ ಬಿಡಿ” ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
"ಅವರ ಯೋಗ್ಯತೆಯ ಮಾನದಂಡವೇನು?” ಎಂದು ಕೇಳಿದ್ದೀರಿ. ಈ ನೆಲದ ಮೇಲಿನ ಹೊಲಸನ್ನು ತೆಗೆದು ಇಡೀ ಪರಿಸರವನ್ನು ಶುದ್ಧವಾಗಿಡುವ ಕಾಯಕ ನಿಮಗೆ ಮಾನದಂಡವಾಗಿ ಕಾಣಲ್ಲವೆ? ನೀವು ಬರೆದಿರುವ ನಾನು ಕೋಟ್ ಮಾಡಿರುವ ಪ್ಯಾರಾಗ್ರಾಫ್ ಅನ್ನು ಮತ್ತೊಮ್ಮೆ ಓದಿಕೊಳ್ಳಿ.. ನಿಮ್ಮಲ್ಲಿ ಇಂತಹ ಕಾಯಕ ಮಾಡುವ ಸಮುದಾಯಗಳ ಮೇಲಿರುವ ಅಸಹನೆಯ ದರ್ಶನವಾಗುತ್ತದೆ. ಇಲ್ಲಿ ಪ್ರಶಸ್ತಿ ವಿಜೇತರಲ್ಲಿ ಕುಡಿಯುವ ಚಟವಿಲ್ಲದವರು ಇಲ್ಲವೇ ಇಲ್ಲವೆ? ನೀವು ಹೇಳಿದಂತೆ ಕುಡಿತವನ್ನೇ ಮಾನದಂಡವಾಗಿ ಇಟ್ಟುಕೊಂಡರೆ ಈ ಪಟ್ಟಿಯಲ್ಲಿ ಕನಿಷ್ಠ ಅರ್ಧ ಜನ ಅನರ್ಹರಾಗುತ್ತಾರೆ. ಕುಡಿತ ಕೇವಲ ಜಾಡಮಾಲಿಗಳನ್ನು ಪರಿಗಣಿಸುವಾಗ ಮಾತ್ರ ಮಾನದಂಡವಾಗುತ್ತದೆಯೇ..? ನಿಮ್ಮ ಬರಹ ಓದಿ ನನಗೆ ಬಹಳ ಬೇಸರವಾಯಿತು” ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಡಾ ಸಿ ಎಸ್ ದ್ವಾರಕನಾಥ್ ಅವರು ಮಲ ಹೊರುವ, ಕಸ ಬಳಿಯುವ ಒಬ್ಬ ದಲಿತರಿಗೆ ರಾಜ್ಯೋತ್ಸವ ಪ್ರಶಸ್ತಿ ಯಾಕೆ ಕೊಡಬಾರದು ಎಂದು ಸಮಿತಿಯ ಸಭೆಯಲ್ಲಿ ಕೇಳಿದ್ದರು. ಆಗ ನಾಗೇಶ ಹೆಗಡೆಯವರು ಮಲ ಹೊರುವ, ಕಸ ಬಳಿಯುವರಿಗೆ ಯಾವ ಮಾನದಂಡದ ಮೇಲೆ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು ಎಂದು ಪ್ರತಿಕ್ರಿಯಿಸಿದ್ದರು. ಈಗ ಅದೇ ಚರ್ಚೆ ಸೋಷಿಯಲ್ ಮೀಡಿಯಾಗೆ ಬಂದು ತಲುಪಿದೆ.
ನಾಗೇಶ ಹೆಗಡೆಯವರ ಬುಧವಾರದ ಬರಹಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಾಗೇಶ್ ಹೆಗಡೆಯವರ ಇತ್ತೀಚಿನ ಪೋಸ್ಟ್ ನೋಡಿದಾಗ, ಇವರು ತುಂಬ ಮಾನವೀಯ ವ್ಯಕ್ತಿತ್ವ ಉಳ್ಳವರು ಎಂದು ಭ್ರಮಿಸಿಕೊಂಡಿದ್ದು ನಮ್ಮದೇ ತಪ್ಪು ಕಲ್ಪನೆಯಾ? ಎಂದು ಅನಿಸಿತು ಎಂದು ಕತೆಗಾರ ದಯಾನಂದ ಟಿ.ಕೆ.ಯವರು ಫೇಸ್ ಬುಕ್ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
“ಸಮಾಜದ ಎಲ್ಲ ಹೊಲಸನ್ನು ಬರಿಗೈಲಿ ಸ್ವಚ್ಛ ಮಾಡಿ, ನಿಮ್ಮಂಥ ಸೋಫೆಸ್ಟಿಕೇಟೆಡ್ ಸುಸಂಕೃತರಿಗೆ ಖಾಯಿಲೆ ಕಸಾಲೆ ಬರದಂತೆ, ನೆಗೆದು ಬಿದ್ದು ಹೋಗದಂತೆ ನೋಡಿಕೊಳ್ಳುತಾರಲ್ಲ ಇದಕ್ಕಿಂತ ಯೋಗ್ಯತೆಯ ಮಾನದಂಡ ಬೇಕೇ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನೀವು ಆಯ್ಕೆ ಮಾಡಿರುವರಲ್ಲಿ ಇರುವ ಕೆಲ ಅನರ್ಹ ಐಟಂಗಳಿಗೆ ಹೋಲಿಸಿದರೆ ಮಲ ಹೊರುವ ರಂಗಸ್ವಾಮಿ, ಕಸ ಗುಡಿಸೋ ಶಂಕ್ರಮ್ಮನಂಥ ಜೀವಗಳು ಸಾವಿರ ಪಾಲು ಮೇಲು. ಒಂಥರದಲ್ಲಿ ಇದು ಒಳ್ಳೇದೇ ಆಯ್ತು. ಇಂಥ ಅನರ್ಹ ಆಯ್ಕೆಗಳ ಮಧ್ಯೆ, ಪೂರ್ವಾಗ್ರಹ ಪೀಡಿತ ಆಯ್ಕೆಗಾರರ ಪ್ರಶಸ್ತಿ ಪಡೆಯೋ ಅವಮಾನ ದಲಿತರಿಗೂ ಬೇಡವಾಗಿತ್ತು” ಎಂದು ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ ಟಿ ಕೆ ದಯಾನಂದ್.
ದ್ವಾರಕಾನಾಥ್ ಅವರ ಕಮೆಂಟ್ ಗೆ ಪ್ರತಿಕ್ರಿಯಿಸಿರುವ ನಾಗೇಶ್ ಹೆಗಡೆಯವರು " ಮಲ ಬಳಿಯುವವರ ಬಗ್ಗೆ ನಾನು ಬರೆದಿದ್ದರಲ್ಲಿ ತಪ್ಪಾಗಿ ಕಂಡರೆ ವಿಷಾದಿಸುತ್ತೇನೆ. ನನಗೆ ಅವರ ಬಗ್ಗೆ ಉದಾಸೀನತೆ ಇಲ್ಲ. ನಿಜ ಹೇಳಬೇಕೆಂದರೆ ಆ ಕೆಲಸದಲ್ಲಿ ಗತಿಸಿದವರ ಲೆಕ್ಕ ಇಟ್ಟು, (ಇಸ್ರೊ ವಿಜ್ಞಾನಿಗಳು ಮಂಗಳಲೋಕದ ಮೀಥೇನ್ ಅನಿಲವನ್ನು ಪತ್ತೆ ಮಾಡಬಲ್ಲಿರಾದರೆ ಈ ಕರ್ಮಚಾರಿಗಳಿಗೆ ಚರಂಡಿಯ ವಿಷಾನಿಲವನ್ನು ಪತ್ತೆ ಮಾಡುವ ಸರಳ ಸಾಧನವನ್ನು BBMP ಯಾಕೆ ಕೊಡುತ್ತಿಲ್ಲ ಎಂದು ಅನೇಕ ವಿಜ್ಞಾನ ವೇದಿಕೆಗಳಲ್ಲಿ ಪ್ರಶ್ನೆ ಎತ್ತಿದವ ನಾನು.) ಆ ಕುರಿತವರ ಮನ ಕಲಕುವ ಚಿತ್ರಗಳ ಸಂಗ್ರಹವೂ ನನ್ನ ಬಳಿ ಇದೆ. ʼಯೋಗ್ಯತೆಯ ಮಾನದಂಡʼ ಎನ್ನುವಾಗ ನನ್ನ ಸಮಸ್ಯೆ ಇಷ್ಟೆ ಇತ್ತು: ರಾಜ್ಯಾದ್ಯಂತ 5000ಕ್ಕೂ ಹೆಚ್ಚು ಶ್ರಮಿಕರು ಈ ಕೆಲಸವನ್ನು ಮಾಡುತ್ತಾರೆ. ಅವರಲ್ಲಿ ಯಾರು ಶ್ರೇಷ್ಠ, ಯಾರಿಗೆ (ಮಾತ್ರ) ಅರ್ಹತೆ ಇದೆ ಎಂಬುದನ್ನು ಅಳೆಯುತ್ತೀರಿ ಹೇಗೆ? ಇದು ನನ್ನ ಪ್ರಶ್ನೆ. ಇದಕ್ಕೆ ನಾನೇ ಕೊಟ್ಟ ಸರಳ ಮಾನದಂಡ ಏನೆಂದರೆ 60ಕ್ಕೂ ಮೀರಿದವರು ಬದುಕಿದ್ದರೆ ಅವರಲ್ಲಿ ಕೆಲವರನ್ನು ಗುರುತಿಸಬೇಕೆ ವಿನಾ, 50ಕ್ಕೇ ಅಸುನೀಗುತ್ತಾರೆ, ಅವರಿಗೆ ವಿನಾಯ್ತಿ ಕೊಡಬೇಕು ಎಂದು ವಾದಿಸುವುದು ಸರಿಯಲ್ಲ -ಇಷ್ಟೆ. ಸಭೆಯಲ್ಲಿ (ನೀವಲ್ಲ,) ಇನ್ಯಾರೋ ಹೀಗೆ ಮಾನದಂಡವನ್ನೇ ಸಡಿಲ ಮಾಡಬೇಕು ಎಂದು ಹೇಳಿದ್ದರು. ಅವರನ್ನು ಉದ್ದೇಶಿಸಿ ನಾನು ಬರೆದೆನೇ ವಿನಾ ಮಲ ಹೊರುವವರ ಬಗ್ಗೆಯಾಗಲೀ ಅವರ ಹಕ್ಕುಗಳನ್ನು ಪ್ರತಿಪಾದಿಸುತ್ತ ಬಂದ ನಿಮ್ಮನ್ನಾಗಲೀ ನೋಯಿಸುವ ಉದ್ದೇಶ ನನಗಿರಲಿಲ್ಲ C.S.Dwarakanath. ಯಾವುದೇ ಶ್ರಮಿಕ ಸಮುದಾಯದ ಬಗೆಗೂ ನನಗೆ ಅಸಹನೆ ಇಲ್ಲ. ಅದು ಹೇಗೋ ನಿಮಗೆ ಇಲ್ಲಿ ಅಂಥ ಅಭಿಪ್ರಾಯ ಬಂದರೆ ನನ್ನ ಬರೆವಣಿಗೆಯಲ್ಲೇ ಏನೋ ತಪ್ಪಿರಬೇಕು. ಅದಕ್ಕೆ ವಿಷಾದವಿದೆ " ಎಂದು ಬರೆದಿದ್ದಾರೆ.
ದ್ವಾರಕಾನಾಥ್ ಅವರ ಕಮೆಂಟ್ ಗೆ ಪ್ರತಿಕ್ರಿಯಿಸಿರುವ ಲೇಖಕಿ ಚೇತನ ತೀರ್ಥಹಳ್ಳಿ "ಮಲ ಹೊರುವವರ ಬಗ್ಗೆ ನಿಮ್ಮ ಪೋಸ್ಟ್ ನಲ್ಲಿರುವ ಅಷ್ಟೂ ಮಾತುಗಳು ತಪ್ಪಾಗಿ ತೋರುತ್ತಿವೆ. ದ್ವಾರಕಾನಾಥ್ ಅವರಿಗೆ ಕೊಟ್ಟ ವಿವರಣೆಯಲ್ಲಿ ಇನ್ನೂ ಹೆಚ್ಚಿನ ತಪ್ಪಾಗಿದೆ. ಉಳಿದ ವಿಷಯಗಳಿಗೆ ಬರೀ ಸಾವಿರಗಟ್ಟಲೆ ಅಲ್ಲ, ಲಕ್ಷಗಟ್ಟಲೆ ಅರ್ಹರ ನಡುವೆ ಆಯ್ಕೆ ಮಾಡುವ ದರ್ದು ಇರುತ್ತದೆ, ಮಲ ಹೊರುವವರು ಸಂಖ್ಯೆ ಕೆಲವು ಸಾವಿರಗಳು. ಅವರಲ್ಲಿ ಒಂದಷ್ಟು ಮಾನದಂಡ ಹಾಕಿಕೊಂಡು ಪ್ರಶಸ್ತಿಗೆ ಆಯ್ಕೆ ಮಾಡುವುದು ಮನಸ್ಸು ಮಾಡಿದ್ದರೆ ಕಷ್ಟ ಆಗುತ್ತಿರಲಿಲ್ಲ. ಬೆಳಗ್ಗೆ ಎದ್ದ ಕೂಡಲೇ ಈ ಬಗ್ಗೆ ಒಂದು ಪೋಸ್ಟ್ ನೋಡಿ ನೀವು ಹಾಗೆ ಪ್ರತಿಕ್ರಿಯೆ ಕೊಟ್ಟಿರಲಿಕ್ಕಿಲ್ಲ ಅನ್ನುವ ಅನುಮಾನದಿಂದಲೇ ನಿಮ್ಮ ಬರಹ ಓದಲು ಬಂದೆ. ಬಹಳ ನಿರಾಸೆ ಆಯಿತು. ನೀವು ವೇದಿಕೆಗಳಲ್ಲಿ ಎಷ್ಟೇ ಪ್ರತಿಪಾದನೆ ಮಾಡಿದರೂ ನಿಮ್ಮಲ್ಲಿ ಒಂದು ಸಮುದಾಯದ ಶ್ರಮದ ಬಗ್ಗೆ ಗೌರವ, ಪ್ರೀತಿ ಇಲ್ಲದೆ ಹೋದರೆ ಇಂಥ ಅಭಿಪ್ರಾಯ ಸಹಜ. ನಿಮಗೆ ಇಂಥ ಪ್ರೀತಿ ಇಲ್ಲವಾಯಿತು ಅನ್ನುವುದು ನಮ್ಮಂಥವರ ಬೇಸರ " ಎಂದು ನಾಗೇಶ್ ಹೆಗಡೆಯವರಿಗೆ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಾಗೇಶ್ ಹೆಗಡೆಯವರು "ನನ್ನ ವಾದದಲ್ಲಿನ ಸೂಕ್ಷ್ಮವನ್ನು ನಿಮಗೆ ಮನಗಾಣಿಸಲು ವಿಫಲ ಆದುದಕ್ಕೆ ನನಗೂ ಬೇಸರ ಇದೆ; ನಿಮಗಾಗಿ ಇನ್ನೊಮ್ಮೆ ಪ್ರಯತ್ನಿಸುತ್ತೇನೆ: ಆ ಸಮುದಾಯದಲ್ಲಿ ಕೆಲವರು ಶಿಸ್ತುಬದ್ಧ ಜೀವನ ನಡೆಸುವ, ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ತುಡಿತ ಇರುವ, ಕುಟುಂಬದ ಹೊಣೆಗಾರಿಕೆಯನ್ನು ನಿಭಾಯಿಸುವ ಕರ್ಮಯೋಗಿಗಳೂ ಇರುತ್ತಾರೆ (Chokka Dwarakanath ಸೂಚಿಸಿದ ಹಿರಿಯರು ಅಂಥವರೇ ಆಗಿರಬಹುದು.) ಆ ವೃತ್ತಿಯನ್ನು ನಿಭಾಯಿಸುತ್ತಲೇ 60 ದಾಟಿದವರನ್ನು ಗುರುತಿಸಿ ಗೌರವಿಸಬೇಕು ಎಂಬ ನನ್ನ ನಿಲುವು ಆಗಿತ್ತು." ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಪತ್ರಕರ್ತ ರಾಜಶೇಖರ್ ಅವರೂ ದ್ವಾರಕಾನಾಥ್ ಅವರ ಕಮೆಂಟ್ ಅನ್ನು ಬೆಂಬಲಿಸಿ " ಬೇರೆ ಬೇರೆ ಕ್ಷೇತ್ರದ ಸಾವಿರಾರು ಜನರ ನಡುವೆ ಬೇರೆ ಬೇರೆ ಮಾನದಂಡ ಇಟ್ಟುಕೊಂಡು ಕೆಲವರನ್ನಷ್ಟೆ ಆಯ್ಕೆ ಮಾಡಿದ ನಿಮಗೆ ಜಾಡುಮಾಲಿಗಳಲ್ಲಿ ಇಬ್ಬರನ್ನು ಅಯ್ಕೆ ಮಾಡಲು ಸಾಧ್ಯವಾಗಲಿಲ್ಲವೇ? ಇದು ಬಲು ಅಚ್ಚರಿ ತರುವ ವಿಷಯ. ನಮ್ಮ ಕರ್ನಾಟಕವನ್ನು (ಮುಖ್ಯವಾಗಿ ಬೆಂಗಳೂರು ಮತ್ತು ಇತರೆ ನಗರಗಳನ್ನು) ಈಗಲೂ ವಾಸಯೋಗ್ಯವಾಗಿ ಇರಿಸಿರೋದು ಜಾಡುಮಾಲಿಗಳೇ ಅಲ್ಲವೇ? ಇದಕ್ಕಿಂತ ಸೇವೆ, ಇದಕ್ಕಿಂತ ಸಾಧನೆ, ಇದಕ್ಕಿಂತ ಮಾನದಂಡ ಬೇಕಾ? ಇಂತಹ ನಿಸ್ವಾರ್ಥ ಕಾಯಕ ಮಾಡುವವರಲ್ಲಿ ಇಬ್ಬರಿಗೆ ಪ್ರಶಸ್ತಿ ಕೊಟ್ಟಿದ್ದರೆ ಪ್ರಶಸ್ತಿಯ ಘನತೆ ಹೆಚ್ಚುತ್ತಿತ್ತು. ಏನೂ ಮಾಡಿದರೂ ಜಾಡುಮಾಲಿಗಳ ಋಣವನ್ನು ತೀರಸಲು ಆಗದ ಈ ನಾಡು, ಪ್ರಶಸ್ತಿಯ ಮೂಲಕ ಅವರಿಗೆ ಕೃತಜ್ಞತೆಯನ್ನಾದರೂ ಸಲ್ಲಿಸಬಹುದಿತ್ತು. ಇಂತಹ ಅದ್ಭುತ ಅವಕಾಶವನ್ನು ನೀವು ಕೈಚೆಲ್ಲಿದ್ದೀರಿ ಅಂತಾ ತಿಳಿದು ನನಗೆ ಅಚ್ಚರಿ ಆಯ್ತು." ಎಂದು ನಾಗೇಶ್ ಹೆಗಡೆಯವರ ಧೋರಣೆಯನ್ನು ವಿರೋಧಿಸಿದ್ದಾರೆ.