ದಿನೇಶ್ ಅಮಿನ್‌ ಮಟ್ಟು, ಹಾಜಿ ಅಬ್ದುಲ್ಲ ಪರ್ಕಳ, ಚಾರ್ಮಾಡಿ ಹಸನಬ್ಬ ಸಹಿತ 68 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

Update: 2023-10-31 16:45 GMT

ಬೆಂಗಳೂರು, ಅ. 31: ರಾಜ್ಯ ಸರಕಾರವು 2023ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 68 ಮಂದಿ ಗಣ್ಯರು ಹಾಗೂ ಮೈಸೂರು ರಾಜ್ಯವು ‘ಕರ್ನಾಟಕ’ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 10 ಸಂಘ-ಸಂಸ್ಥೆಗಳಿಗೆ ‘ಕರ್ನಾಟಕ ಸಂಭ್ರಮ-50 ರಾಜ್ಯೋತ್ಸವ’ ಪ್ರಶಸ್ತಿಯನ್ನು ಪ್ರಕಟಿಸಿದೆ.

ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಇಸ್ರೋ ಅಧ್ಯಕ್ಷ ಎಸ್.ಸೋಮನಾಥನ್, ಲೇಖಕಿ ಡಾ.ಕೆ. ಷರೀಫಾ, ಕವಿ ಸುಬ್ಬುಹೊಲೆಯಾರ್, ಸಾಹಿತಿ ಲಕ್ಷ್ಮಿಪತಿ ಕೋಲಾರ, ಜಾನಪದ ಕಲಾವಿದೆ ಹುಸೇನಾಬಿ ಬುಡೆನ್‍ಸಾಬ್ ಸಿದ್ಧಿ, ಸಮಾಜ ಸೇವಕ ಚಾರ್ಮಾಡಿ ಹಸನಬ್ಬ, ಹಾಜಿ ಅಬ್ದುಲ್ಲ ಪರ್ಕಳ, ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, ವೈದ್ಯ ಡಾ.ಪ್ರಶಾಂತ್ ಶೆಟ್ಟಿ ಸೇರಿದಂತೆ 68 ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದು, ನಾಳೆ(ನ.1) ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ‘ರಾಜ್ಯೋತ್ಸವ ಪ್ರಶಸ್ತಿಗಾಗಿ 1,357 ಅರ್ಜಿಗಳು ಸಲ್ಲಿಕೆಯಾಗಿದ್ದವು. 2,166 ಮಂದಿಯನ್ನು ಸೇವಾಸಿಂಧು ವೆಬ್‍ಸೈಟ್ ಮೂಲಕ 26,555 ಮಂದಿ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡುವಂತೆ ಶಿಫಾರಸ್ಸು ಮಾಡಿದ್ದರು ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, 176 ಮಂದಿಯ ಪಟ್ಟಿಯನ್ನು ನಮಗೆ ಸಲ್ಲಿಸಿತ್ತು. ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಅಂತಿಮವಾಗಿ ರಾಜ್ಯದ ಎಲ್ಲ ಜಿಲ್ಲೆಗಳು, ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ವೈಯಕ್ತಿಕವಾಗಿ 68 ಮಂದಿಗೆ ಹಾಗೂ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಸಂಭ್ರಮದ ಹಿನ್ನೆಲೆಯಲ್ಲಿ 10 ಸಂಘ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಬಾರಿ ಒಟ್ಟು 78 ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿರುವವರ ಪೈಕಿ ದಾವಣಗೆರೆ ಜಿಲ್ಲೆಯ ಕೆ.ರೂಪ್ಲಾ ನಾಯ್ಕ್ (ಸಮಾಜಸೇವೆ), ಉತ್ತರ ಕನ್ನಡ ಜಿಲ್ಲೆಯ ಹುಸೇನಾಬಿ ಬುಡೆನ್ ಸಾಬ್ ಸಿದ್ದಿ(ಜಾನಪದ) ಶತಾಯುಷಿಗಳಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಶಿವಂಗಿ ಶಣ್ಮರಿ(ಜಾನಪದ) 95 ವರ್ಷ, ಬೀದರ್ ಜಿಲ್ಲೆಯ ನರಸಪ್ಪಾ ಎಂಬ ಮಂಗಳಮುಖಿ, ಕೊಪ್ಪಳ ಜಿಲ್ಲೆಯ ಹುಚ್ಚಮ್ಮ ಎಂಬವರು ತಮ್ಮ 2 ಎಕರೆ ಜಮೀನನ್ನು ಶಾಲೆಗೆ ದಾನವಾಗಿ ನೀಡಿ, ಅದೇ ಶಾಲೆಯಲ್ಲಿ ಬಿಸಿಯೂಟವನ್ನು ಸಿದ್ಧಪಡಿಸುತ್ತಾರೆ. ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ರಾಮನಗರ ಜಿಲ್ಲೆಯ ಪುಟ್ಟಸ್ವಾಮಿಗೌಡ 95 ವರ್ಷ, ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆಸಲ್ಲಿಸಿದ್ದ ಕೊದಂಡ ಪೂವಯ್ಯ ಕಾರ್ಯಪ್ಪ, ಪತ್ರಿಕೆಯ ವಿತರಕ ಮೈಸೂರಿನ ಜವರಪ್ಪ, ನ್ಯಾ.ವಿ.ಗೋಪಾಲಗೌಡ, ಚಂದ್ರಯಾನ ಯಶಸ್ಸಿನ ರೂವಾರಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥನ್ ಅವರನ್ನು ಆಯ್ಕೆ ಮಾಡಲಾಗಿದೆ. 68 ಮಂದಿಯಲ್ಲಿ 13 ಮಹಿಳೆಯರು, ಒಬ್ಬರು ಮಂಗಳಮುಖಿ ಇದ್ದಾರೆ ಎಂದು ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.

ಪ್ರಶಸ್ತಿಯು 5 ಲಕ್ಷ ರೂ.ಗಳ ನಗದು, 25 ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಪತ್ರ, ಫಲ ತಾಂಬೂಲವನ್ನು ಒಳಗೊಂಡಿರುತ್ತದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕತೆಯನ್ನು ಗಮನದಲ್ಲಿಟ್ಟುಕೊಂಡು ಸಾಧಕರಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ದಿನೇಶ್ ಅಮಿನ್‍ಮಟ್ಟು, ಮಾಯಾಶರ್ಮ, ಜವರಪ್ಪ, ಹುಚ್ಚಮ್ಮ ಬಸಪ್ಪ ಚೌದ್ರಿ, ನ್ಯಾ.ವಿ.ಗೋಪಾಲಗೌಡ, ಡಾ.ಎಸ್.ಸೋಮನಾಥನ್, ಡಾ.ಶಂಭುಬಳಿಗಾರ್, ಕೊದಂಡ ಪೂವಯ್ಯ ಕಾರ್ಯಪ್ಪ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಆದರೂ, ಸರಕಾರ ಅವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.

ಪ್ರಶಸ್ತಿ ಪುರಸ್ಕೃತರ ವಿವರ:

ಸಂಗೀತ/ನೃತ್ಯ: ಡಾ.ನಯನ ಎಸ್.ಮೋರೆ(ಬೆಂಗಳೂರು), ನೀಲಾ ಎಂ.ಕೊಡ್ಲಿ(ಧಾರವಾಡ), ಶಬ್ಬೀರ್ ಅಹ್ಮದ್(ಬೆಂಗಳೂರು), ಡಾ.ಎಸ್.ಬಾಳೇಶ ಭಜಂತ್ರಿ(ಬೆಳಗಾವಿ).

ಚಲನಚಿತ್ರ: ಡಿಂಗ್ರಿ ನಾಗರಾಜ(ಬೆಂಗಳೂರು), ಬ್ಯಾಂಕ್ ಜನಾರ್ದನ(ಬೆಂಗಳೂರು).

ರಂಗಭೂಮಿ: ಎ.ಜಿ.ಚಿದಂಬರ ರಾವ್ ಜಂಬೆ(ಶಿವಮೊಗ್ಗ), ಪಿ.ಗಂಗಾಧರಸ್ವಾಮಿ (ಮೈಸೂರು), ಎಚ್.ಬಿ.ಸರೋಜಮ್ಮ(ಧಾರವಾಡ), ತಯ್ಯಬ್‍ಖಾನ್ ಎಂ.ಇನಾಮದಾರ (ಬಾಗಲಕೋಟೆ), ಡಾ.ವಿಶ್ವನಾಥ್ ವಂಶಾಕೃತಮಠ(ಬಾಗಲಕೋಟೆ), ಪಿ.ತಿಪ್ಪೇಸ್ವಾಮಿ(ಚಿತ್ರದುರ್ಗ).

ಶಿಲ್ಪಕಲೆ/ಚಿತ್ರಕಲೆ/ಕರಕುಶಲ: ಟಿ.ಶಿವಶಂಕರ್(ದಾವಣಗೆರೆ), ಕಾಳಪ್ಪ ವಿಶ್ವಕರ್ಮ(ರಾಯಚೂರು), ಮಾರ್ಥಾ ಜಾಕಿಮೋವಿಚ್(ಬೆಂಗಳೂರು), ಪಿ.ಗೌರಯ್ಯ(ಮೈಸೂರು).

ಯಕ್ಷಗಾನ/ಬಯಲಾಟ: ಅರ್ಗೋಡು ಮೋಹನದಾಸ್ ಶೆಣೈ(ಉಡುಪಿ), ಕೆ.ಲೀಲಾವತಿ ಬೈಪಾಡಿತ್ತಾಯ(ದಕ್ಷಿಣ ಕನ್ನಡ), ಕೇಶಪ್ಪ ಶಿಳ್ಳಿಕ್ಯಾತರ(ಕೊಪ್ಪಳ), ದಳವಾಯಿ ಸಿದ್ದಪ್ಪ(ಹಂದಿಜೋಗಿ)-ವಿಜಯನಗರ.

ಜಾನಪದ: ಹುಸೇನಾಬಿ ಬುಡೆನ್ ಸಾಬ್ ಸಿದ್ದಿ(ಉತ್ತರ ಕನ್ನಡ), ಶಿವಂಗಿ ಶಣ್ಮರಿ(ದಾವಣಗೆರೆ), ಮಹದೇವು(ಮೈಸೂರು), ನರಸಪ್ಪಾ(ಬೀದರ್), ಶಕುಂತಲಾ ದೇವಲಾನಾಯಕ(ಕಲಬುರಗಿ), ಎಚ್.ಕೆ.ಕಾರಮಂಚಪ್ಪ(ಬಳ್ಳಾರಿ), ಡಾ.ಶಂಭು ಬಳಿಗಾರ(ಗದಗ), ವಿಭೂತಿ ಗುಂಡಪ್ಪ(ಕೊಪ್ಪಳ), ಚೌಡಮ್ಮ(ಚಿಕ್ಕಮಗಳೂರು).

ಸಮಾಜಸೇವೆ: ಹುಚ್ಚಮ್ಮ ಬಸಪ್ಪ ಚೌದ್ರಿ(ಕೊಪ್ಪಳ), ಚಾರ್ಮಾಡಿ ಹಸನಬ್ಬ(ದಕ್ಷಿಣ ಕನ್ನಡ), ಕೆ.ರೂಪ್ಲಾ ನಾಯಕ್(ದಾವಣಗೆರೆ), ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮಿ(ಬೆಳಗಾವಿ), ಜಿ.ನಾಗರಾಜು(ಬೆಂಗಳೂರು).

ಆಡಳಿತ: ಜಿ.ವಿ.ಬಲರಾಮ್(ತುಮಕೂರು).

ವೈದ್ಯಕೀಯ:ಡಾ.ಸಿ.ರಾಮಚಂದ್ರ(ಬೆಂಗಳೂರು), ಡಾ.ಪ್ರಶಾಂತ್ ಶೆಟ್ಟಿ(ದಕ್ಷಿಣ ಕನ್ನಡ).

ಸಾಹಿತ್ಯ: ಪ್ರೊ.ಸಿ.ನಾಗಣ್ಣ(ಚಾಮರಾಜನಗರ), ಸುಬ್ಬು ಹೊಲೆಯಾರ್(ಹಾಸನ), ಸತೀಶ್ ಕುಲಕರ್ಣಿ(ಹಾವೇರಿ), ಲಕ್ಷ್ಮೀಪತಿ ಕೋಲಾರ(ಕೋಲಾರ), ಪರಪ್ಪ ಗುರುಪಾದಪ್ಪ ಸಿದ್ದಾಪುರ(ವಿಜಯಪುರ), ಡಾ.ಕೆ.ಷರೀಫಾ(ಬೆಂಗಳೂರು).

ಶಿಕ್ಷಣ: ರಾಮಪ್ಪ(ರಾಮಣ್ಣ)ಹವಳೆ-ರಾಯಚೂರು, ಕೆ.ಚಂದ್ರಶೇಖರ್(ಕೋಲಾರ), ಕೆ.ಟಿ.ಚಂದು(ಮಂಡ್ಯ).

ಕ್ರೀಡೆ: ದಿವ್ಯಾ ಟಿ.ಎಸ್.(ಕೋಲಾರ), ಅದಿತಿ ಅಶೋಕ್(ಬೆಂಗಳೂರು), ಅಶೋಕ್ ಗದಿಗೆಪ್ಪ ಏಣಗಿ(ಧಾರವಾಡ).

ನ್ಯಾಯಾಂಗ: ನ್ಯಾ.ವಿ.ಗೋಪಾಲಗೌಡ(ಚಿಕ್ಕಬಳ್ಳಾಪುರ).

ಕೃಷಿ-ಪರಿಸರ: ಸೋಮನಾಥರೆಡ್ಡಿ ಪೂರ್ಮಾ(ಕಲಬುರಗಿ), ದ್ಯಾವನಗೌಡ ಟಿ.ಪಾಟೀಲ್(ಧಾರವಾಡ), ಶಿವರೆಡ್ಡಿ ಹನುಮರೆಡ್ಡಿ ವಾಸನ(ಬಾಗಲಕೋಟೆ).

ಸಂಕೀರ್ಣ: ಎಂ.ಎಂ.ಮದರಿ(ವಿಜಯಪುರ), ಹಾಜಿ ಅಬ್ದುಲ್ಲಾ ಪರ್ಕಳ(ಉಡುಪಿ), ಮಿಮಿಕ್ರಿ ದಯಾನಂದ್(ಮೈಸೂರು), ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್(ಮೈಸೂರು), ಲೆಫ್ಟಿನೆಂಟ್ ಜನರಲ್ ಕೊದಂಡ ಪೂವಯ್ಯ ಕಾರ್ಯಪ್ಪ(ಕೊಡಗು).

ಮಾಧ್ಯಮ: ದಿನೇಶ್ ಅಮೀನ್‍ಮಟ್ಟು(ದಕ್ಷಿಣ ಕನ್ನಡ), ಜವರಪ್ಪ(ಮೈಸೂರು), ಮಾಯಾ ಶರ್ಮ(ಬೆಂಗಳೂರು), ರಫಿ ಭಂಡಾರಿ(ವಿಜಯಪುರ).

ವಿಜ್ಞಾನ/ತಂತ್ರಜ್ಞಾನ: ಎಸ್.ಸೋಮನಾಥನ್ ಶ್ರೀಧರ್ ಪನಿಕರ್(ಬೆಂಗಳೂರು), ಪ್ರೊ.ಗೋಪಾಲನ್ ಜಗದೀಶ್(ಚಾಮರಾಜನಗರ).

ಹೊರನಾಡು/ಹೊರದೇಶ: ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ.

ಸ್ವಾತಂತ್ರ್ಯ ಹೋರಾಟಗಾರ: ಪುಟ್ಟಸ್ವಾಮಿ ಗೌಡ.

ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ದಕ್ಷಿಣ ಕನ್ನಡ), ಮೌಲಾನ ಆಝಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕøತಿಕ ಸಂಘ(ದಾವಣಗೆರೆ), ಮಾರುತಿ ಜನಸೇವಾ ಸಂಘ(ದಕ್ಷಿಣ ಕನ್ನಡ), ಕರ್ನಾಟಕ ಸಂಘ(ಶಿವಮೊಗ್ಗ), ಬಿ.ಎನ್.ಶ್ರೀರಾಮ ಪುಸ್ತಕ ಪ್ರಕಾಶನ(ಮೈಸೂರು), ಮಿಥಿಕ್ ಸೊಸೈಟಿ(ಬೆಂಗಳೂರು), ಕರ್ನಾಟಕ ಸಾಹಿತ್ಯ ಸಂಘ(ಯಾದಗಿರಿ), ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ(ಬಾಗಲಕೋಟೆ), ಚಿಣ್ಣರ ಬಿಂಬ(ಮುಂಬೈ) ಹಾಗೂ ವಿದ್ಯಾದಾನ ಸಮಿತಿ(ಗದಗ).

ಸಂಪೂರ್ಣ ಪಟ್ಟಿ ಇಲ್ಲಿದೆ...

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News