ರಾಮನಗರ: ಚುನಾವಣಾಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಮತಪತ್ರ ಕದ್ದು ಪರಾರಿಯಾಗಿದ್ದ ಮೂವರು ಆರೋಪಿಗಳ ಬಂಧನ

Update: 2023-09-30 11:06 GMT

ರಾಮನಗರ: ಹಾಲು ಉತ್ಪಾದಕರ ಸಂಘದ ಚುನಾವಣೆಗಾಗಿ ತೆರಳುತ್ತಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಮತದಾನದ ಬ್ಯಾಲೆಟ್ ಪೇಪರ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದ ಮೂವರನ್ನು ಕುಣಿಕಲ್ ಸಮೀಪ ಶುಕ್ರವಾರ ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಹುಳ್ಳೇನಹಳ್ಳಿಯ ದಾಸೇಗೌಡ, ಮನು ಗೌಡ, ಶ್ರೀನಿವಾಸ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲೆಯ ಮಾಗಡಿ ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಸೆ.27ರಂದು ಚುನಾವಣೆ ನಡೆಯಬೇಕಿತ್ತು. ಚುನಾವಣೆ ನಡೆಸಲು ಐವರು ಅಧಿಕಾರಿಗಳು ಬ್ಯಾಲೆಟ್ ಪೇಪರ್ ಮತ್ತು ಚುನಾವಣಾ ಪರಿಕರಗಳನ್ನು ತೆಗೆದುಕೊಂಡು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ, ಮಾರ್ಗ ಮಧ್ಯದಲ್ಲಿ ಅವರನ್ನು ಅಡ್ಡಗಟ್ಟಿದ ಐವರು ದುಷ್ಕರ್ಮಿಗಳ ಗುಂಪು ಅಧಿಕಾರಗಳ ಮೇಲೆ ಹಲ್ಲೆ ನಡೆಸಿ, ಚುನಾವಣಾ ಪರಿಕರಗಳನ್ನು ಕಿತ್ತುಕೊಂಡು ಪರಾರಿಯಾಗಿತ್ತು. ಚುನಾವಣೆ ತಡೆಯುವ ಉದ್ದೇಶದಿಂದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

‘ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಆರೋಪಿಗಳು, ಚುನಾವಣೆ ನಡೆಸಲು ತೆರಳುತ್ತಿದ್ದಾಗ ಚುನಾ ವಣಾಧಿಕಾರಿಗಳ ಕಾರು ಅಡ್ಡಗಟ್ಟಿ ಚುನಾವಣಾ ಪರಿಕರಗಳನ್ನು ಕದ್ದು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News