ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನ ಫೊಟೋ ಬಿಡುಗಡೆ, ಮುಂದುವರಿದ ಶೋಧ ಕಾರ್ಯ
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಆರೋಪಿಯ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಕೈಗೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಅಧಿಕಾರಿಗಳು, ಶಂಕಿತನ ಫೋಟೋ ಬಿಡುಗಡೆ ಮಾಡಿದ್ದು, ಆರೋಪಿಯನ್ನು ನೋಡಿದ್ದಲ್ಲಿ ಅಥವಾ ಆತನ ಬಗ್ಗೆ ಸುಳಿವಿದ್ದಲ್ಲಿ ಮಾಹಿತಿ ನೀಡಿ ಎಂದು ಮನವಿ ಮಾಡಿದೆ.
ಸ್ಫೋಟ ಸಂಭವಿಸಿ 9 ದಿನಗಳು ಕಳೆದರೂ ಆರೋಪಿಯ ಯಾವುದೇ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಆರೋಪಿಯ ಬಗ್ಗೆ ಸುಳಿವು ನೀಡಲು ಕೋರಿ ರೇಖಾಚಿತ್ರ ಬಿಡುಗಡೆ ಮಾಡಿ, 10ಲಕ್ಷ ರೂ.ನಗದು ಬಹುಮಾನವನ್ನೂ ಘೋಷಣೆ ಮಾಡಿದ್ದ ಎನ್‍ಐಎ ಅಧಿಕಾರಿಗಳು, ಇದೀಗ ಆರೋಪಿಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಟೀ ಶರ್ಟ್, ಜೀನ್ಸ್ ಫ್ಯಾಂಟ್ ಧರಿಸಿ, ಹೆಗಲಿಗೆ ಬ್ಯಾಗ್, ಮುಖಕ್ಕೆ ಮಾಸ್ಕ್ ಹಾಕಿರುವ ಭಾವಚಿತ್ರಗಳನ್ನು ಬಿಡುಗಡೆ ಮಾಡಿದೆ.
ಇದೀಗ ಶಂಕಿತ ಆರೋಪಿಯ ಮತ್ತಷ್ಟು ಭಾವಚಿತ್ರಗಳನ್ನು ಬಿಡುಗಡೆಗೊಳಿಸಿರುವ ಎನ್‍ಐಎ, ಆರೋಪಿಯ ಕುರಿತು ಯಾವುದೇ ಸುಳಿವಿದ್ದಲ್ಲಿ ದೂರವಾಣಿ ಸಂಖ್ಯೆ-080-2951 0900, ಮೊಬೈಲ್ ಫೋನ್ ಸಂಖ್ಯೆ-89042 41100 ಹಾಗೂ ಇ-ಮೇಲ್-- info.blr.nia.gov.in ಸಂಪರ್ಕಿಸಬೇಕು ಎಂದು ಎಕ್ಸ್ ನಲ್ಲಿ ಪೋಸ್ಟ್ ಹಾಕಿದೆ.
ಸ್ಫೋಟ ಪ್ರಕರಣ ಆರೋಪಿಯ ಬಂಧನಕ್ಕೆ ತನಿಖೆ ಕೈಗೊಂಡಿರುವ ಎನ್‍ಐಎ ನಿನ್ನೆಯಷ್ಟೇ ಶಂಕಿತನ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಮಾ.1ರಂದು ರಾಮೇಶ್ವರ ಕೆಫೆ ಸ್ಫೋಟದ ಬಳಿಕ ಶಂಕಿತ ಬಿಎಂಟಿಸಿ ಬಸ್‍ನಲ್ಲಿ ಸಂಚರಿಸಿದ್ದಲ್ಲದೆ, ಬಳ್ಳಾರಿ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಿರುವುದು ವಿಡಿಯೋದಲ್ಲಿ ಇದೆ.