ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ

Update: 2024-03-06 14:17 GMT

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧದ ಶಂಕಿತ ಆರೋಪಿಯ ಬಂಧನಕ್ಕೆ ಸಹಕಾರಿಯಾಗುವಂತಹ ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) 10 ಲಕ್ಷ ರೂ.ನಗದು ಬಹುಮಾನ ಘೋಷಿಸಿದೆ.

ಪ್ರಕರಣದ ತನಿಖೆ ಆರಂಭಿಸಿರುವ ಎನ್‍ಐಎ ಅಧಿಕಾರಿಗಳು ಬುಧವಾರ ಆರೋಪಿಯ ಫೊಟೋ ಬಿಡುಗಡೆಗೊಳಿಸಿದ್ದು, ಆರೋಪಿಯ ಕುರಿತು ಯಾವುದೇ ಸುಳಿವು ಇದ್ದಲ್ಲಿ ದೂ.ಸಂ:080-2951 0900, ಮೊಬೈಲ್ ಸಂಖ್ಯೆ-89042 41100, ಹಾಗೂ ಇಮೇಲ್ ವಿಳಾಸ: info.blr.nia.gov.in ಗೆ ಹಂಚಿಕೊಳ್ಳುವಂತೆ ಹಾಗೂ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿರಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ: ನಗರದ ವೈಟ್‍ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾ.1ರಂದು ಸ್ಫೋಟ ಸಂಭವಿಸಿ 9 ಮಂದಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಬ್ಯಾಗ್ ಸಮೇತ ಕೆಫೆಗೆ ಆಗಮಿಸಿ, ಬಳಿಕ ಒಬ್ಬನೇ ತೆರಳುತ್ತಿರುವುದು ಪತ್ತೆಯಾಗಿದೆ. ಈತನ ಚಹರೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‍ಐಎ ತಂಡದಿಂದ ತನಿಖೆ ಚುರುಕು: ಬಾಂಬ್ ಸ್ಫೋಟ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಅಧಿಕಾರಿಗಳ ತಂಡ ಮಾ.5ರಂದು ಕೆಫೆಗೆ ಭೇಟಿ ನೀಡಿ ತನಿಖೆ ಆರಂಭಿಸಿತ್ತು. ಎನ್‍ಐಎ ಎಸ್ಪಿ ನೇತೃತ್ವದ ಮೂವರು ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದು, ಕೆಫೆ ಸಿಬ್ಬಂದಿಯಿಂದ ಘಟನಾ ದಿನದ ವಿವರ ಪಡೆದುಕೊಂಡಿದ್ದರು. ಈ ತನಿಖೆ ಇನ್ನು ಮುಂದುವರಿದಿದ್ದು, ಈಗ ಆರೋಪಿ ಸುಳಿವು ನೀಡಿದವರಿಗೆ ಎನ್‍ಐಎ 10 ಲಕ್ಷ ನಗದು ಬಹುಮಾನ ನೀಡುವುದಾಗಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News