ಸದನ ಆರಂಭಕ್ಕೆ ಮುನ್ನ ರೇಷನ್ ಕಾರ್ಡ್ ವಾಪಸ್ ನೀಡಿ, ಇಲ್ಲದಿದ್ದರೆ ತೀವ್ರ ಹೋರಾಟ : ಆರ್.ಅಶೋಕ್ ಎಚ್ಚರಿಕೆ
ಬೆಂಗಳೂರು : "ಸದನ ಆರಂಭವಾಗುವ ಮುನ್ನವೇ ರಾಜ್ಯ ಸರಕಾರ ಜನರಿಗೆ ರೇಷನ್ ಕಾರ್ಡ್ ವಾಪಸ್ ನೀಡಬೇಕು. ಇಲ್ಲವಾದರೆ ತೀವ್ರವಾದ ಹೋರಾಟ ಮಾಡಿ ಸರಕಾರಿ ಕಚೇರಿಗಳಿಗೆ ಹಾಗೂ ವಿಧಾನಸೌಧಕ್ಕೆ ಬೀಗ ಹಾಕುತ್ತೇವೆ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.
ಜಯನಗರದ ಅರಸು ಕಾಲೋನಿಯಲ್ಲಿ ರೇಷನ್ ಕಾರ್ಡ್ ರದ್ದುಗೊಂಡ ಕುಟುಂಬದವರನ್ನು ಅವರು ಭೇಟಿ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಎಂದು ಹೇಳಿ ಕನ್ನಭಾಗ್ಯ ಕೊಟ್ಟಿದ್ದಾರೆ. ಅನ್ನವನ್ನು ಕದ್ದು ಲಕ್ಷಾಂತರ ಜನರಿಗೆ ಅನ್ಯಾಯ ಮಾಡಿದ್ದಾರೆ. ಅರಸು ಕಾಲೋನಿಯಲ್ಲಿ 45 ವರ್ಷದಿಂದ ರೇಷನ್ ಕಾರ್ಡ್ ಹೊಂದಿದ್ದ ವೃದ್ಧೆ, ಈಗ ಅರ್ಹತೆ ಕಳೆದುಕೊಂಡಿದ್ದಾರೆ. ಅಂಕಿ-ಅಂಶದ ಪ್ರಕಾರ, 250 ಸರಕಾರಿ ನೌಕರರ ಬಳಿ ರೇಷನ್ ಕಾರ್ಡ್ ಇದ್ದರೂ, 12 ಲಕ್ಷ ಜನರ ಕಾರ್ಡ್ ರದ್ದು ಮಾಡಲು ಸರಕಾರ ಮುಂದಾಗಿದೆ. ಏನೂ ಭಯ ಬೇಡ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರೆ, ಆಹಾರ ಸಚಿವರು ಮತ್ತೆ ಅರ್ಜಿ ಹಾಕಿ ಎಂದು ಹೇಳುತ್ತಾರೆ. ಕಾಂಗ್ರೆಸ್ ನಾಯಕರು ತಪ್ಪು ಮಾಡಿದ ಮೇಲೆ ಜನರು ಯಾಕೆ ಮರಳಿ ಅರ್ಜಿ ಹಾಕಬೇಕು?ʼ ಎಂದು ಪ್ರಶ್ನೆ ಮಾಡಿದರು.
ಮರಳಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಒಂದು ಕಾರ್ಡ್‌ಗೆ 10-15 ಸಾವಿರ ರೂ. ಲಂಚ ನೀಡಬೇಕಾಗುತ್ತದೆ. ಯಾರೂ ಅರ್ಜಿ ಹಾಕಬಾರದು, ಸರಕಾರವೇ ಮರಳಿ ರೇಷನ್ ಕಾರ್ಡ್ ಕೊಡಬೇಕು. ದೇವಸ್ಥಾನದ ಮುಂದೆ ಹೂ ಮಾರುವವರು, ಸೊಪ್ಪು ಮಾರುವವರ ರೇಷನ್ ಕಾರ್ಡ್ ರದ್ದುಪಡಿಸಲಾಗಿದೆ. ಇದರ ವಿರುದ್ಧ ಸದನದಲ್ಲಿ ಹಾಗೂ ಹೊರಗೆ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
ʼಏಕಾಏಕಿ ರೇಷನ್ ಕಾರ್ಡ್ ರದ್ದು ಮಾಡಲು ಸರಕಾರಕ್ಕೆ ಅಧಿಕಾರವಿಲ್ಲ. ಸರಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದ್ದು, ರಸ್ತೆ ಗುಂಡಿ ಮುಚ್ಚಲು ಕೂಡ ಹಣವಿಲ್ಲ. 20-30 ಸಾವಿರ ಕೋಟಿ ರೂ. ಉಳಿಸಿ, ಶಾಸಕರ ಬಂಡಾಯ ಶಮನಕ್ಕೆ ಬಳಸಲಾಗುತ್ತದೆʼ ಎಂದು ದೂರಿದರು.
ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಕೆ.ರಾಮಮೂರ್ತಿ ಉಪಸ್ಥಿತರಿದ್ದರು.