ಪತ್ನಿಗೆ ಪರಿಹಾರ ನೀಡಲು ನಿರಾಕರಣೆ: ಪತಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್
ಬೆಂಗಳೂರು: ರಕ್ತಕ್ಕಿಂತ ರೊಟ್ಟಿ ಬೆಲೆ ಹೆಚ್ಚಾಗಿರುವ ಪ್ರಸ್ತುತ ದಿನಗಳಲ್ಲಿ ಇಬ್ಬರು ಮಕ್ಕಳು ಮತ್ತು ಹೆಂಡತಿಯ ನಿರ್ವಹಣೆಗೆ 25 ಸಾವಿರ ರೂ.ಗಳನ್ನು ನೀಡಲಾಗದು ಎಂಬ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿ ಮತ್ತು ಇಬ್ಬರು ಮಕ್ಕಳ ಜೀವನ ನಿರ್ವಹಣೆಗಾಗಿ 25 ಸಾವಿರ ರೂ.ಗಳ ಪರಿಹಾರ ನೀಡುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಮೊಹಮ್ಮದ್ ಅಮ್ಜದ್ ಪಾಷ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.
ಅಲ್ಲದೇ, ಪತಿಯಿಂದ ದೂರವಿರುವ ಪತ್ನಿ ಹಾಗೂ ಅಂಗವೈಕಲ್ಯಕ್ಕೆ ಗುರಿಯಾಗಿರುವ ಮಕ್ಕಳನ್ನು ನೋಡಿಕೊಳ್ಳುವುದು ಪತಿಯ ಜವಾಬ್ದಾರಿ ಆಗಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಸ್ತುತದ ಪ್ರಕರಣದಲ್ಲಿ ಸುಮಾರು 17 ವರ್ಷದ ಪುತ್ರಿ ಅಂಗವಿಕಲೆಯಾಗಿದ್ದು, 14 ವರ್ಷದ ಮತ್ತೊಬ್ಬ ಪುತ್ರಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, 25 ಸಾವಿರ ರೂ.ಗಳ ಪರಿಹಾರ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಪತ್ನಿಯು ಉದ್ಯೋಗದಲ್ಲಿದ್ದಾರೆ ಅಥವಾ ಆಕೆಗೆ ಬೇರೆ ಆದಾಯದ ಮೂಲ ಇದೆ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಅಷ್ಟೇ ಅಲ್ಲದೆ, ಪತ್ನಿ ಮತ್ತು ಮಕ್ಕಳ ಉಸ್ತುವಾರಿ ನೋಡಿಕೊಳ್ಳುವ ಪ್ರಧಾನ ಕರ್ತವ್ಯ ಅರ್ಜಿದಾರರ ಹೆಗಲ ಮೇಲಿದೆ ಎಂದು ಪೀಠ ತಿಳಿಸಿದೆ.