24 ಸಾವಿರ ನಕಲಿ ಕಾರ್ಮಿಕರ ನೋಂದಣಿ ರದ್ದು: ಸಚಿವ ಸಂತೋಷ್‌ ಲಾಡ್‌

Update: 2023-07-06 17:12 GMT

ಬೆಂಗಳೂರು, ಜು.6: ಕಾರ್ಮಿಕ ಇಲಾಖೆಯಿಂದ ಅನರ್ಹರು ಕಾರ್ಮಿಕ ಕಾರ್ಡ್‍ಗಳನ್ನು ಪಡೆದಿದ್ದ ಕಾರ್ಮಿಕರ ಸೌಲಭ್ಯಗಳನ್ನು ಪಡೆದಿದ್ದಾರೆ. ಅದನ್ನು ಪತ್ತೆಹಚ್ಚಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಗುರುವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಕಾರ್ಮಿಕರ ಹೆಸರಿನಲ್ಲಿ ನೋಂದಣಿ ಮಾಡಿಸಿ, ಸರ್ಕಾರದ ಸೌಲಭ್ಯ ಪಡೆಯುತ್ತಿದ್ದ 24 ಸಾವಿರ ನಕಲಿ ಕಾರ್ಮಿಕರ ನೋಂದಣಿ ರದ್ದು ಮಾಡಲಾಗಿದೆ' ಎಂದು ‌ಮಾಹಿತಿ ನೀಡಿದರು. 

ಹಿಂದಿನ 4 ವರ್ಷಗಳ ಅವಧಿಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿದ್ದ ಸೆಸ್‍ನಲ್ಲಿ 10,236 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇದರಲ್ಲಿ 6,633 ಕೋಟಿ ರೂ.ಗಳನ್ನು ಪರಿಹಾರ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಬಳಸಲಾಗಿದೆ. 3,946 ಕೋಟಿ ರೂ.ಗಳನ್ನು ಪೌಷ್ಠಿಕಾಂಶ ಸೇರಿದಂತೆ ಇನ್ನಿತರೆ ಆಹಾರ ನೀಡಲು ವೆಚ್ಚ ಮಾಡಲಾಗಿದೆ ಎಂದು ಅವರು ಹೇಳಿದರು.

2006-07 ರಿಂದ ಇಲ್ಲಿಯ ತನಕ ಸರಿ ಸುಮಾರು 57 ಲಕ್ಷ ಮಂದಿ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸದಸ್ಯರಾಗಿದ್ದಾರೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಕಾರ್ಮಿಕ ನಿರೀಕ್ಷಕ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಲೋಪದೋಷಗಳನ್ನು ಸರಿಪಡಿಸಲಾಗುವುದು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News