ಡಿ.26ರಿಂದ ‘ಯುವ ನಿಧಿ’ ನೋಂದಣಿ ಆರಂಭ: ಸಚಿವ ಶರಣ ಪ್ರಕಾಶ್ ಪಾಟೀಲ್

Update: 2023-12-21 13:16 GMT

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ಯೋಜನೆ ನೋಂದಣಿ ಪ್ರಕ್ರಿಯೆ ಡಿ.26ರಂದು ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿರುದ್ಯೋಗಿ ಪದವೀಧರರಿಗೆ ನೆರವಾಗಲೆಂದು ರಾಜ್ಯ ಸರಕಾರ ರೂಪಿಸಿರುವ ಯುವನಿಧಿ ಯೋಜನೆ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂ.ಭತ್ತೆ ನೀಡಲಾಗುತ್ತದೆ. ಡಿ.26ರಂದು ಯುವನಿಧಿ ಯೋಜನೆಯ ನೋಂದಣಿಗೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಾಲನೆ ದೊರೆಯಲಿದೆ ಎಂದರು.

ಇನ್ನೂ, ಮುಂದಿನ ತಿಂಗಳು ಜನವರಿ 12ರಂದು ವಿವೇಕಾನಂದ ಜಯಂತಿ ದಿನದಂದು ಶಿವಮೊಗ್ಗದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಯುವನಿಧಿ ಯೋಜನೆಗೆ ಕರ್ನಾಟಕ ರಾಜ್ಯಾದ್ಯಂತ ಒಟ್ಟು 5.29,153 ಫಲಾನುಭವಿಗಳು ಇರುವುದನ್ನು ಅಂದಾಜಿಸಲಾಗಿದೆ. ಅವರಲ್ಲಿ ಪದವೀಧರರು 4,81,000 ಹಾಗೂ ಡಿಪ್ಲೊಮಾ ತೇರ್ಗಡೆಯಾದವರು 48,153 ಆಗಿದ್ದಾರೆ ಎಂದು ಹೇಳಿದರು.

ನಿರುದ್ಯೋಗ ಭತ್ತೆ ನೀಡಲು 250 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ.ಈ ಯೋಜನೆಯಡಿ ರಾಜ್ಯದ ಪದವೀಧರರು, ಸ್ನಾತಕೋತ್ತರ ಪದವೀಧರರು, ಡಿಪ್ಲೊಮಾ ತೇರ್ಗಡೆಯಾದವರು ನಿರುದ್ಯೋಗ ಭತ್ತೆಯನ್ನು ಪಡೆಯಲು ಅರ್ಹರಿರುತ್ತಾರೆ ಎಂದ ಅವರು, ಪದವಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಠ 6 ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು ಎಂದು ಅವರು ಉಲ್ಲೇಖಿಸಿದರು.

ಯಾರಾರು ಅರ್ಹರು?:

♦ ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ ಪದವಿ, ಡಿಪ್ಲೊಮಾ 2023ರಲ್ಲಿ ತೇರ್ಗಡೆಯಾಗಿರಬೇಕು.

♦ ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ಪದವಿ, ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕ ನಿವಾಸಿಯಾಗಿರಬೇಕು.

ಅರ್ಜಿ ಸಲ್ಲಿಕೆ ಹೇಗೆ?:

ಆಸಕ್ತ ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಜಾಲತಾಣ https://sevasindhugs.karnataka.gov.in ನಲ್ಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ-ಓನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ-ಓನ್ ಕೇಂದ್ರಗಳನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಆಧಾರ್ ಸಂಖ್ಯೆಯನ್ನು ನಮೂದಿಸಿ O.T.P ಪಡೆದು KYC ಮಾಹಿತಿಯನ್ನು ಪಡೆದುಕೊಳ್ಳತಕ್ಕದ್ದು.

ಇನ್ನೂ, ಪದವೀಧರರು 10ನೆ ತರಗತಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ, ರೇಷನ್ ಕಾರ್ಡ್ ಸಂಖ್ಯೆ ನೀಡಬೇಕು. ಡಿಪ್ಲೊಮಾ ಅಭ್ಯರ್ಥಿಗಳು 10ನೆ ತರಗತಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ, ರೇಷನ್ ಕಾರ್ಡ್ ಸಂಖ್ಯೆ ನೀಡಬೇಕು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News