ಮುಸ್ಲಿಮ್ ಎಂಬ ಕಾರಣಕ್ಕೆ ಪ್ರಾಂಶುಪಾಲರ ಹುದ್ದೆ ನಿರಾಕರಣೆ: ಎಚ್.ಡಿ.ರೇವಣ್ಣ ಆರೋಪ
ಬೆಂಗಳೂರು, ಜು.12: 'ಮುಸ್ಲಿಮ್ ಎಂಬ ಕಾರಣಕ್ಕೆ ಪ್ರಾಂಶುಪಾಲ ಹುದ್ದೆ ನಿರಾಕರಣೆ ಮಾಡಲಾಗಿದೆ' ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದಣಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೂ ಮುಸ್ಲಿಮರಿಗೆ ರಕ್ಷಣೆ ಇಲ್ಲ ಎಂದು ದೂರಿದರು.
''ಹಾಸನ ಕಲಾ ಕಾಲೇಜಿನಲ್ಲಿ ಮುಸ್ಲಿಮರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆ ಕೊಟ್ಟಿಲ್ಲ. ಅಲ್ಲದೆ, ಮುಸ್ಲಿಮ್ ವ್ಯಕ್ತಿಗೆ ಹುದ್ದೆ ಪಡೆಯುವ ಹಿರಿತನ ಇದ್ದರೂ ಅವರಿಗೆ ಹುದ್ದೆ ಕೊಟ್ಟಿಲ್ಲ. ಬದಲಾಗಿ, ಕಿರಿಯ ದರ್ಜೆಯ ವ್ಯಕ್ತಿಗೆ ಹುದ್ದೆ ನೀಡಲಾಗಿದೆ'' ಎಂದು ಉಲ್ಲೇಖಿಸಿದರು.
''ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕಿದ್ದಾರೆ. ಆ ವ್ಯಕ್ತಿ ಹುದ್ದೆಗೆ ಅರ್ಹರಾದವರು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಈ ತಪ್ಪು ಸರಿಪಡಿಸಲು ಸೂಚನೆ ನೀಡಬೇಕು ಎಂದ ಅವರು, ಈ ಸರಕಾರ ಬಂದ ಮೇಲೂ ಮುಸ್ಲಿಮರಿಗೆ ರಕ್ಷಣೆ ಇಲ್ಲ.ಈಗಲಾದರೂ ಮುಸ್ಲಿಮರಿಗೆ ರಕ್ಷಣೆ ಕೊಡಿ ''ಎಂದು ಆಗ್ರಹಿಸಿದರು.