ಹೆಡಗೇವಾರ್ ಸ್ಮಾರಕಕ್ಕೆ ನನ್ನನ್ನು ಪ್ರವೇಶಿಸಲು ಬಿಟ್ಟಿರುವ ಸಿಸಿಟಿವಿ ಫೂಟೇಜ್ ಬಿಡುಗಡೆ ಮಾಡಿ: ಬಿಜೆಪಿ ನಾಯಕರಿಗೆ ಗೂಳಿಹಟ್ಟಿ ಸವಾಲು
ಬೆಂಗಳೂರು, ಡಿ.9: ಜಾತಿ ಕಾರಣಕ್ಕೆ ನಾಗ್ಪುರದ ಆರೆಸ್ಸೆಸ್ ಕಚೇರಿಯಲ್ಲಿರುವ ಹೆಡಗೇವಾರ್ ಸ್ಮಾರಕದ ಒಳಗೆ ತನಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಆರೋಪಿಸಿ ಸುದ್ದಿಯಾಗಿದ್ದ ಬಿಜೆಪಿಯ ಮಾಜಿ ಸಚಿವ, ಶಾಸಕ ಗೂಳಿಹಟ್ಟಿ ಶೇಖರ್ ಅವರದ್ದೆನ್ನಲಾದ ಮತ್ತೊಂದು ಆಡಿಯೋ ಹೇಳಿಕೆ ಇದೀಗ ವೈರಲ್ ಆಗಿದ್ದು, ಹೆಡಗೇವಾರ್ ಸ್ಮಾರಕದ ಒಳಗೆ ನನ್ನನ್ನು ಪ್ರವೇಶಿಸಲು ಅವಕಾಶ ನೀಡಿದ್ದರೆ ಅದರ ಸಿಸಿಟಿವಿ ಫೂಟೇಜ್ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.
ಹೆಡಗೇವಾರ್ ಸ್ಮಾರಕದ ಒಳಗೆ ಪ್ರವೇಶ ನಿರಾಕರಣೆ ವಿಚಾರವಾಗಿ ತನ್ನನ್ನು ಟೀಕಿಸಿದ್ದ ಬಿಜೆಪಿ ನಾಯಕರನ್ನು ಗೂಳಿಹಟ್ಟಿ ಶೇಖರ್ ಅವರದ್ದೆನ್ನಲಾದ ಎರಡನೇ ಆಡಿಯೋದಲ್ಲಿ ತೀವ್ರ ತರಾಟೆಗೈಯಲಾಗಿದೆ. ಈ ಆಡಿಯೋ ವನ್ನು ಗೂಳಿಹಟ್ಟಿ ಶೇಖರ್ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ್ದರೆನ್ನಲಾಗಿದೆ
"ನಾನು ಒಡ್ಡ, ನಾನು ಕುಡಿಯುತ್ತೇನೆ. ಹಾಗಂತ ಸುಳ್ಳು ಹೇಳುವುದಿಲ್ಲ. ನನ್ನ ಹೇಳಿಕೆ ಸುಳ್ಳು ಅಥವಾ ಸತ್ಯ ಎಂಬುದನ್ನು ಸಾಬೀತುಪಡಿಸಲು, ಹೆಡಗೇವಾರ್ ಸ್ಮಾರಕದಲ್ಲಿರುವ ಸಿಸಿಟಿವಿ ವೀಡಿಯೋ ತರಿಸಿ ಬಿಡುಗಡೆ ಮಾಡಿ. ನನ್ನನ್ನು ಒಳಗಡೆ ಬಿಡದಿರುವ ಸಿಸಿಟಿವಿ ವೀಡಿಯೋ ತೋರಿಸಿ. ಸುಳ್ಳು ಹೇಳಿದರೆ ನಿಮ್ಮ ಮನೆಗಳಲ್ಲಿ ಜೀತ ಮಾಡುತ್ತೇನೆ, ಕಸ ಗುಡಿಸುತ್ತಾ ಇರುತ್ತೇನೆ, ನೀವು ಹೇಳಿದ ಯಾವುದೇ ಕೆಲಸ ಮಾಡಲು ಸಿದ್ಧ'' ಎಂದು ತನ್ನ ಆರೋಪವನ್ನು ಟೀಕಿಸಿದ್ದ ವಿಪಕ್ಷ ನಾಯಕ್ ಆರ್.ಅಶೋಕ್, ಸುರೇಶ್ ಕುಮಾರ್, ಮಾಜಿ ಶಾಸಕ ಕುಡಚಿ ರಾಜೀವ್ ಅವರಿಗೆ ಸವಾಲೆಸೆಯಲಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ 4 ತಿಂಗಳ ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್, ಆ ನಂತರ ಸಂಘದ ಅನೇಕ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ ಅವಮಾನದ ಬಗ್ಗೆ ಹೇಳಿರಲಿಲ್ಲ. ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರ ಎಂದು ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಹೇಳಿಕೆಗೂ ಆಡಿಯೋದಲ್ಲಿ ಪ್ರತಿಕ್ರಿಯೆ ಇದ್ದು, "ಆರೆಸ್ಸೆಸ್ ಕಚೇರಿಗೆ ಒಳಗೆ ಬಿಟ್ಟುಕೊಳ್ಳದ ವಿಚಾರವನ್ನು ಎಂಟು ತಿಂಗಳ ಮೊದಲೇ ತಾನು ಬಹಿರಂಗಪಡಿಸಿದ್ದರೆ ಕಳೆದ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ ಇನ್ನೊಂದಿಷ್ಟು ಕ್ಷೇತ್ರಗಳನ್ನು ಕಳೆದುಕೊಳ್ಳುತ್ತಾ ಇತ್ತು" ಎಂದು ಆಡಿಯೋದಲ್ಲಿ ಹೇಳಲಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ 4 ತಿಂಗಳ ಮುಂಚೆ ನಾಗ್ಪುರದ ಆರೆಸ್ಸೆಸ್ ಕಚೇರಿಯಲ್ಲಿರುವ ಹೆಡಗೇವಾರ್ ಸ್ಮಾರಕದಲ್ಲಿ ಜಾತಿ ಕೇಳಿ ಅದೇ ಕಾರಣಕ್ಕೆ ನನಗೆ ಒಳಗಡೆ ಬಿಡಲಿಲ್ಲ ಎಂದು ದೂರಿದ್ದರು. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆಡಿಯೋ ಬಿಡುಗಡೆ ಯಾಗುತ್ತಿದ್ದಂತೆ, ಆರೆಸ್ಸೆಸ್ ಕಚೇರಿ ಬಗ್ಗೆ ಆಡಿಯೊ ಹೇಳಿಕೆಯಲ್ಲಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಆರೆಸ್ಸೆಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ತಿಳಿಸಿದ್ದರು. ಅದರ ಬೆನ್ನಲ್ಲೇ, ಬಿಜೆಪಿ ನಾಯಕರು ಆ ರೀತಿ ನಡೆದೇ ಇಲ್ಲ. ಸೋಲಿನ ಕಾರಣದಿಂದ ಗೂಳಿಹಟ್ಟಿ ಶೇಖರ್ ಹತಾಶೆಯಿಂದ ಮಾತಾಡ್ತಿದ್ದಾರೆ ಎಂದು ಸಮಜಾಯಿಷಿ ನೀಡಿದ್ದರು.