ಬಿಜೆಪಿ ಮುಖಂಡ ರೇಣುಕಾಚಾರ್ಯ ಭೇಟಿ ಬಗ್ಗೆ ಸಚಿವ ಮಲ್ಲಿಕಾರ್ಜುನ ಹೇಳಿದ್ದೇನು?

Update: 2023-08-27 16:33 GMT

ದಾವಣಗೆರೆ: ಮಾಜಿ ಸಚಿವ, ಬಿಜೆಪಿ ಮುಖಂಡ ರೇಣುಕಾಚಾರ್ಯ ಸಹಜ ಭೇಟಿಯಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ , ಕಂದಾಯ ಸಚಿವರ ಜೊತೆಗೆ ತಮ್ಮ ತಂದೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರನ್ನೂ ರೇಣುಕಾಚಾರ್ಯರವರು ಭೇಟಿ ಮಾಡಿದ್ದರಂತೆ. ಇದೊಂದು ಸಹಜ ಭೇಟಿಯಷ್ಟೇ. ನನ್ನ ಬಳಿಯೂ ಬಂದು, ವಿಶ್ ಮಾಡಿ ಹೋಗಿದ್ದಾರೆ. ಪಕ್ಷದ ವಿಚಾರ ಏನೂ ಮಾತನಾಡಿಲ್ಲ, ಏನನ್ನೂ ಹೇಳಿಲ್ಲ. ನಮ್ಮ ಭೇಟಿಗೆ ಬಂದಿದ್ದರೂ ಟೀ ಕುಡಿಸಿ, ಕಳಿಸುವುದು ನನ್ನ ಕೆಲಸ. ಬೇರೆ ಏನೂ ವಿಚಾರ ಹೇಳಿಲ್ಲ. ಯಾವುದೇ ಗೌಪ್ಯತೆ ಇಲ್ಲ ಎಂದು ಅ ಸ್ಪಷ್ಪಪಡಿಸಿದರು.

ರೇಣುಕಾಚಾರ್ಯರವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಒಲವು ತೋರಿಸಿಲ್ಲ. ನಾನೂ ಪಕ್ಷ ಸೇರ್ಪಡೆ ವಿಚಾರ ಮಾತನಾಡಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ಇದ್ದಾಗ ಹಾಗಿತ್ತು, ಹೀಗಿತ್ತು ಎಂದಷ್ಟೇ ರೇಣುಕಾಚಾರ್ಯ ಹೇಳಿದ್ದರು. ಈಗ ಪಕ್ಷದಲ್ಲಿ ತಮಗೆಲ್ಲಾ ತುಂಬಾ ಅನ್ಯಾಯ ಮಾಡಿದ್ದನ್ನು ಪ್ರಸ್ತಾಪಿಸಿದರಷ್ಟೇ. ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂಬುದಾಗಿಯೂ ಹೇಳಿದರು ಎಂದು ಸಚಿವರು ತಿಳಿಸಿದರು.

ಪಕ್ಷಕ್ಕೆ ಬರುವವರಿಗೆ ದಿನದ 24 ಗಂಟೆಯೂ ಕಾಂಗ್ರೆಸ್ ಬಾಗಿಲು ತೆರೆದಿರುತ್ತದೆ. ರೇಣುಕಾಚಾರ್ಯ ಸೇರಿದಂತೆ ಯಾರನ್ನೂ ನಾನು ಕರೆದಿಲ್ಲ. ಕಾಂಗ್ರೆಸ್‌ನ ತತ್ವ, ಸಿದ್ಧಾಂತ ನಂಬಿ, ತಾವಾಗಿಯೇ ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸೇರಿಸಿಕೊಳ್ಳುತ್ತೇವೆ. ಅಲ್ಲದೆ, ಅಂತಹವರಿಗೆ ಜೈ ಎನ್ನುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಜನರಿದ್ದಾರೆ. ನನ್ನ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್‌ರ ಸ್ಪರ್ಧೆ ಬಗ್ಗೆ ಯೋಚನೆ ಇಲ್ಲ. ಇದರ ಬಗ್ಗೆ ಚರ್ಚೆಯೂ ಆಗಿಲ್ಲ. ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಕುಟುಂಬ ಸದಸ್ಯರು ತಮ್ಮ ಮನೆಯಲ್ಲಿ ವರ ಮಹಾಲಕ್ಷ್ಮೀ ಪೂಜೆಯೆಂದು ತಮ್ಮ ಮನೆಗೆ ಆಹ್ವಾನಿಸಿದ್ದರು. ಪೂಜೆಗೆ ಹೋಗಿದ್ದರಷ್ಟೇ. ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಲೋಕಸಭೆ ಚುನಾವಣೆ ಕಣಕ್ಕಿಳಿಸುವ ಬಗ್ಗೆ ಆಲೋಚನೆ ಇಲ್ಲ. ಅದರ ಬಗ್ಗೆ ನಾವು ಚರ್ಚೆಯೂ ಮಾಡಿಲ್ಲ ಎಂದರು.

ಬರ ಪೀಡಿತ ಪ್ರದೇಶಗಳ ಘೋಷಣೆಗೆ ಕೇಂದ್ರ ಸರಕಾರದ ಸಹಕಾರ ಅಗತ್ಯ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತದೆ. ಕೇಂದ್ರವೂ ಸಹಕರಿಸಬೇಕು. ನಾನು ಕೆಲವು ಕಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ. ಆ.28ರಂದು ಮತ್ತೆ ಕೆಲ ತಾಲೂಕುಗಳಿಗೆ ಭೇಟಿ ನೀಡುತ್ತೇನೆ ಎಂದು ಸಚಿವ ಮಲ್ಲಿಕಾರ್ಜುನ ಹೇಳಿದರು.

ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ, ನೆರವು ನೀಡುವ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕು. ಬರ ಪೀಡಿತ ಜಿಲ್ಲೆಯ ಘೋಷಣೆಗೆ ಕೇಂದ್ರ ಸರಕಾರದ ಮೇಲೆ ಸಾಕಷ್ಟು ಹೊಣೆ ಇದ್ದು, ಮಾನದಂಡಗಳನುಸಾರ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಬೇಕು. ಈ ಬಗ್ಗೆ ಸಂಸದರೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು.

ಎಸ್.ಎಸ್.ಮಲ್ಲಿಕಾರ್ಜುನ, ಸಚಿವ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News