ರೇಣುಕಾಸ್ವಾಮಿ ಕೊಲೆ | ದರ್ಶನ್ ಸೇರಿ ಆರೋಪಿಗಳ ಕಸ್ಟಡಿ ಅವಧಿ ನಾಳೆ ಅಂತ್ಯ: ನ್ಯಾಯಾಂಗ ಬಂಧನ ಸಾಧ್ಯತೆ?

Update: 2024-06-19 16:31 GMT

ಪವಿತ್ರಾ ಗೌಡ/ ದರ್ಶನ್

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಮಂದಿ ಆರೋಪಿಗಳ ಪೊಲೀಸರ ವಿಚಾರಣಾ ಅವಧಿ ನಾಳೆ(ಜೂ.20) ಅಂತ್ಯವಾಗಲಿದ್ದು, ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ.

ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಎರಡನೇ ಬಾರಿ ಐದು ದಿನಗಳ ಕಾಲ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳ ವಿಚಾರಣಾವಧಿ ನಾಳೆ (ಜೂ.20) ಮುಕ್ತಾಯವಾಗಲಿದ್ದು, ಇಂದು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಲು ರಿಮ್ಯಾಂಡ್ ಅರ್ಜಿಯನ್ನು ಪೊಲೀಸರು ಈಗಾಗಲೇ ಸಿದ್ದಪಡಿಸಿದ್ದು, ವರದಿಯಲ್ಲಿ ಪ್ರಕರಣದ ಇಂಚಿಂಚೂ ಮಾಹಿತಿ, ಸಾಕ್ಷಿಗಳನ್ನು ಸಂಗ್ರಹಿಸುವುದಾಗಿ ತಿಳಿಸಲಾಗಿದೆ.

ಪ್ರಕರಣ ಎಲ್ಲ ಪ್ರಮುಖ ಆರೋಪಿಗಳಿಗೆ ನ್ಯಾಯಾಧೀಶರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಸಾಧ್ಯತೆಯಿದೆ.

118 ಸಾಕ್ಷ್ಯಗಳ ಜಪ್ತಿ: ಈ ಪ್ರಕರಣ ತನಿಖೆ ಕೈಗೊಂಡಿರುವ ವಿಜಯನಗರ ಉಪವಿಭಾಗದ ಪೊಲೀಸರು ಇದುವರೆಗೂ ಬರೋಬ್ಬರಿ 118 ವಸ್ತುಗಳನ್ನು ವಿವಿಧ ಸ್ಥಳಗಳಿಂದ ಜಪ್ತಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಕೊಲೆಯಾದ ಸ್ಥಳವಾದ ಪಟ್ಟಣಗೆರೆ ಶೆಡ್‍ನಲ್ಲಿ ದೊರೆತ ಪ್ರತಿಯೊಂದು ವಸ್ತುವನ್ನು ಸಹ ಸೀಝ್ ಮಾಡಲಾಗಿದೆ. ಬೆಂಗಳೂರು, ಮೈಸೂರು, ಚಿತ್ರದುರ್ಗದಲ್ಲಿ ಸ್ಥಳ ಮಹಜರು ಮಾಡಿ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಕೃತ್ಯಕ್ಕೆ ಬಳಸಿದಂತಹ ವಸ್ತುಗಳು, ಆರೋಪಿಗಳ ಬಟ್ಟೆಗಳು, ಶೂ, ಚಪ್ಪಲಿ ಹಾಗೂ ಓಡಾಡಲು ಬಳಸಿದಂತಹ ವಾಹನಗಳು, ಆರೋಪಿಗಳ ಮೊಬೈಲ್‍ಗಳು ಸೇರಿದಂತೆ ಹೀಗೆ ಹಲವು ಸಾಕ್ಷ್ಯಗಳನ್ನು ಕಲೆಹಾಕಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಟ ದರ್ಶನ್ ಮನೆ, ಪವಿತ್ರಗೌಡ ಮನೆ ಹಾಗೂ ದರ್ಶನ್‍ಗೆ ಸೇರಿದ ಫಾರ್ಮ್‍ಹೌಸ್ ಹಾಗೂ ಕೃತ್ಯಕ್ಕೂ ಮುನ್ನ ಪಾರ್ಟಿ ಮಾಡಿದಂತಹ ಹೊಟೇಲ್ ಮತ್ತು ದರ್ಶನ್ ಬಂಧನದ ವೇಳೆ ತಂಗಿದ್ದ ಹೊಟೇಲ್‍ಗಳಲ್ಲೂ ಸಹ ಸ್ಥಳ ಮಹಜರು ನಡೆಸಿರುವ ಪೊಲೀಸರು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್ ಪತ್ತೆಗೆ ಅಗ್ನಿಶಾಮಕ ದಳದ ಮೊರೆ: ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ರೇಣುಕಾಸ್ವಾಮಿ ಮೃತದೇಹ ಎಸೆದ ರಾಜಕಾಲುವೆಗೆ ಆತನ ಮೊಬೈಲ್ ಅನ್ನು ಸಹ ಆರೋಪಿ ರಾಘವೇಂದ್ರ ಎಸೆದಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದ್ದು, ರಾಜಕಾಲುವೆಯಲ್ಲಿ ಹುಡುಕಾಟ ನಡೆಸಿದರಾದರೂ ಇದುವರೆಗೂ ಪತ್ತೆಯಾಗಿಲ್ಲ. ಅಲ್ಲದೆ ಆರೋಪಿ ರಾಘವೇಂದ್ರನ ಮೊಬೈಲ್ ಅನ್ನು ಸಹ ಆರೋಪಿ ಪ್ರದೋಶ್ ಅದೇ ರಾಜಕಾಲುವೆಗೆ ಎಸೆದಿದ್ದು, ಈ ಎರಡೂ ಮೊಬೈಲ್ ಫೋನ್‍ಗಳು ಪತ್ತೆಯಾದರೆ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ. ಮೊಬೈಲ್ ಪತ್ತೆಗಾಗಿ ಇದೀಗ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯ ನೆರವನ್ನು ಪಡೆದು ಪೊಲೀಸರು ಹುಡುಕಾಟ ಕೈಗೊಂಡಿರುವುದಾಗಿ ತಿಳಿದುಬಂದಿದೆ.

ನಟ ದರ್ಶನ್ ಸೇರಿ 9 ಆರೋಪಿಗಳ ಡಿಎನ್‍ಎ ಪರೀಕ್ಷೆ: ನಟ ದರ್ಶನ್ ಸೇರಿದಂತೆ 9 ಮಂದಿ ಆರೋಪಿಗಳನ್ನು ಬುಧವಾರ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಡಿಎನ್‍ಎ ಪರೀಕ್ಷೆಗೊಳಗೆ ಒಳಪಡಿಸಲಾಯಿತು.

ನಟ ದರ್ಶನ್, ಪವಿತ್ರಾ ಗೌಡ, ಪವನ್, ರಾಘವೇಂದ್ರ, ವಿನಯ್ ಸೇರಿದಂತೆ ಎಲ್ಲ ಆರೋಪಿಗಳನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದು, ಕೊಲೆಗೈದ ಶೆಡ್‍ನಲ್ಲಿ ರಕ್ತದ ಮಾದರಿ ಹಾಗೂ ಕೂದಲು ದೊರೆತಿದ್ದು, ಎಫ್‍ಎಸ್‍ಎಲ್ ಅಧಿಕಾರಿಗಳು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಸ್ಥಳದಲ್ಲಿದ್ದ ರಕ್ತದ ಮಾದರಿ ಹಾಗೂ ಕೂದಲು ಯಾರದ್ದು ಎಂಬುದರ ಬಗ್ಗೆ ನಿಖರವಾಗಿ ತಿಳಿಯಲು ಪೊಲೀಸರು ಡಿಎನ್‍ಎ ಪರೀಕ್ಷೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News