ರೇಣುಕಾಸ್ವಾಮಿ ಕೊಲೆ ಪ್ರಕರಣ : ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ ನಟ ಚಿಕ್ಕಣ್ಣ

Update: 2024-08-10 12:21 GMT

ದರ್ಶನ್‌ (x/@dasadarshan)/ಚಿಕ್ಕಣ್ಣ(facebook)

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸಿನೆಮಾ ನಟ ಚಿಕ್ಕಣ್ಣ ಸೇರಿ ಅನೇಕ ಸಾಕ್ಷಿದಾರರ ಹೇಳಿಕೆಯನ್ನು ಸಿಆರ್‌ಪಿಸಿ ಸೆಕ್ಷನ್ 164ನಡಿ ನ್ಯಾಯಾಧೀಶರ ಮುಂದೆ ದಾಖಲು ಮಾಡಲಾಗಿದೆ.

ಶನಿವಾರ ನಗರದ 24ನೆ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಸ್ಯ ನಟ ಚಿಕ್ಕಣ್ಣ, ತಮ್ಮ ಹೇಳಿಕೆ ದಾಖಲಿಸಿದರು. ಈಗಾಗಲೇ ಪೊಲೀಸ್ ವಿಚಾರಣೆಯಲ್ಲಿ ನೀಡಿದ ಹೇಳಿಕೆಯನ್ನೆ ಕೋರ್ಟ್‍ನಲ್ಲಿ ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.

ಹೇಳಿಕೆ ಏಕೆ?: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಆರೋಪಿ ರಾಘವೇಂದ್ರ ಹಾಗೂ ಆತನ ಸಹಚರರು ಪಟ್ಟಣಗೆರೆ ಶೆಡ್ ಕರೆದುಕೊಂಡು ಬಂದಿದ್ದರು. ಅದೇ ದಿನ ಆರ್.ಆರ್.ನಗರದಲ್ಲಿರುವ ಸ್ಟೋನಿ ಬ್ರೂಕ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲಕ ವಿನಯ್, ದರ್ಶನ್, ಪ್ರದೂಷ್, ನಾಗರಾಜ್ ಸೇರಿ ಹಲವರು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ ಸಹ ಭಾಗಿಯಾಗಿದ್ದರು.

ಈ ಮಧ್ಯೆ ಪಟ್ಟಣಗೆರೆ ಶೆಡ್‍ನಲ್ಲಿದ್ದ ಮತ್ತೊಂದು ಆರೋಪಿಗಳು ಕರೆ ಮಾಡಿ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದರು. ಕರೆ ಬಂದ ಕೆಲ ಹೊತ್ತಿನಲ್ಲಿ ರೆಸ್ಟೋರೆಂಟ್‍ನಿಂದ ಆರೋಪಿಗಳು ಶೆಡ್‍ಗೆ ಹೋಗಿ ಹತ್ಯೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರೆಸ್ಟೋರೆಂಟ್‍ಗೆ ಹೋಗಿ ಸಿಸಿಟಿವಿ ಮತ್ತು ಡಿವಿಆರ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗಿಯಾಗಿರುವುದು ಸ್ಪಷ್ಟವಾಗಿತ್ತು.

ಪೊಲೀಸರ ವಿಚಾರಣೆ ವೇಳೆ, ರೆಸ್ಟೋರೆಂಟ್ ಪಾರ್ಟಿ ಆಯೋಜನೆ ಹಿನ್ನೆಲೆ ಊಟಕ್ಕೆ ಕರೆದಿದ್ದರು. ನಾನು ಹೋಗಿ ಊಟ ಮಾಡಿಕೊಂಡು ಬಂದಿದ್ದೇನೆ. ರೇಣುಕಸ್ವಾಮಿ ಹತ್ಯೆಗೂ ತನಗೂ ಸಂಬಂಧವಿಲ್ಲ ಎಂದು ಈ ಹಿಂದೆ ಚಿಕ್ಕಣ್ಣ ಸ್ಪಷ್ಟನೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News