ರೇಣುಕಾಸ್ವಾಮಿ ಕೊಲೆ ಪ್ರಕರಣ | ದರ್ಶನ್‌, ಪವಿತ್ರಾ ಗೌಡ ಸೇರಿ 13 ಮಂದಿಯನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ​​​

Update: 2024-06-15 16:25 GMT

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ನಟ ದರ್ಶನ್, ಆತನ ಆಪ್ತ ಸ್ನೇಹಿತೆ ಪವಿತ್ರಾಗೌಡ ಸೇರಿ 13 ಮಂದಿ ಆರೋಪಿಗಳಿಗೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ನಗರದ 42ನೆ ಎಸಿಎಂಎಂ ನ್ಯಾಯಾಲಯವು ಶನಿವಾರ ಆದೇಶಿಸಿದೆ.

ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ವಿನಯ್, ನಾಗರಾಜ್, ಲಕ್ಷ್ಮಣ್, ದೀಪಕ್, ಪ್ರದೋಷ್, ನಿಖಿಲ್ ನಾಯಕ್, ಜಗದೀಶ್ ಹಾಗೂ ಅನುಕುಮಾರ್ ಸೇರಿ 13 ಮಂದಿಯನ್ನು ಜೂ.20ರವರೆಗೆ ಐದು ದಿನಗಳ ಪೊಲೀಸ್ ಕಸ್ಟಡಿ ನೀಡಿ ನ್ಯಾಯಮೂರ್ತಿ ವಿಶ್ವನಾಥ್ ಸಿ.ಗೌಡರ್ ಅವರು ಆದೇಶಿಸಿದರು.

ಪ್ರಕರಣ ಸಂಬಂಧ ವಾದ ಆರಂಭಿಸಿದ ಎಸ್‍ಪಿಪಿ ಪ್ರಸನ್ನ ಕುಮಾರ್, ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ಒಟ್ಟು 18 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆರೋಪಿಗಳನ್ನು ಕರೆದೊಯ್ದು ಕೃತ್ಯವೆಸಗಿದ್ದ ಸ್ಥಳ ಮಹಜರು ಮಾಡಿ ಹಲವು ಸಾಕ್ಷ್ಯಾಧಾರ ಸಂಗ್ರಹಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ಸೀಝ್ ಮಾಡಲಾಗಿದೆ. ಆರೋಪಿಗಳ ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಶುಕ್ರವಾರದಂದು ಆರೋಪಿ ಜಗದೀಶ್ ಹಾಗೂ ಅನುಕುಮಾರ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 30ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ. ಪ್ರಕರಣದ 5ನೆ ಆರೋಪಿ ನಂದೀಶ್ ಹಾಗೂ ಎ-13 ದೀಪಕ್ ಎಂಬುವರು ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿದ್ದು, ಇದರ ಡಿವೈಸ್ ಅನ್ನು ವಶಕ್ಕೆ ಪಡೆಯಬೇಕಿದೆ. ಸಾಕ್ಷಿ ನಾಶಪಡಿಸಲು ಆರೋಪಿಗಳಿಂದ ಸಂಚು ನಡೆದಿದೆ. ಆರೋಪಿತರಿಂದ ತನಿಖೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಕಲೆ ಹಾಕಬೇಕಿದೆ. ಅಲ್ಲದೆ, ಮೈಸೂರಿನಲ್ಲಿ ಸ್ಥಳ ಮಹಜರು ಮಾಡಬೇಕಾಗಿದೆ. ಹೀಗಾಗಿ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ದರ್ಶನ್ ಪರ ವಕೀಲ ಅನಿಲ್ ಬಾಬು ವಾದ ಮಂಡಿಸಿ ಪ್ರಕರಣದಲ್ಲಿ ‘ಎಲ್ಲದಕ್ಕೂ ಎರಡನೇ ಆರೋಪಿ ದರ್ಶನ್ ಅವರೇ ಕಾರಣ ಎಂಬುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು. ಕಸ್ಟಡಿಯಲ್ಲಿರುವಾಗ ಆರೋಪಿತರಿಗೆ ಪೊಲೀಸರು ಎಲೆಕ್ಟ್ರಿಕಲ್ ಶಾಕ್ ನೀಡಿದ್ದಾರೆ. ಹೀಗಾಗಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ.

ಪವಿತ್ರಾಗೌಡ ಪರ ವಕೀಲ ನಾರಾಯಣಸ್ವಾಮಿ ವಾದ ಮಂಡಿಸಿ ಪವಿತ್ರಾಗೌಡರನ್ನು 6 ದಿನಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ಕೋರ್ಟ್ ಅನುಮತಿ ಪಡೆಯದೆ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಹೇಳಿಕೆ ಹೊರಗೆ ಸೋರಿಕೆಯಾಗುತ್ತಿದೆ. ಹೀಗಾಗಿ ನ್ಯಾಯಾಂಗ ಬಂಧನ ನೀಡಬೇಕೆಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿತರನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ಸದ್ಯ ವಶಕ್ಕೆ ಪಡೆದುಕೊಂಡ ಪೊಲೀಸರು 13 ಮಂದಿ ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ವಾಪಸ್ ಕರೆದೊಯ್ದರು.

ಕೊಲೆ ಪ್ರಕರಣ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿದ್ದ ನಟ ದರ್ಶನ್, ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳ ವಿಚಾರಣಾ ಅವಧಿ ನಾಳೆಗೆ(ಜೂ.16) ಅಂತ್ಯವಾಗಲಿದೆ. ಆದರೆ, ಇಂದು ಸರಕಾರಿ ರಜೆ ಇರುವುದರಿಂದ ಶನಿವಾರವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಜನರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮೊದಲು ಬಂಧಿಸಿದ್ದರು. ಬಳಿಕ ಶುಕ್ರವಾರ ಮತ್ತೆ ಐವರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 18ಕ್ಕೆ ಏರಿದೆ.

ಈ ಮೊದಲು ದರ್ಶನ್ ಸೇರಿ 13 ಆರೋಪಿಗಳನ್ನು 6 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದ ಪೊಲೀಸರು, ಸ್ಥಳ ಮಹಜರು ನಡೆಸಿ, ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದು, ಸದ್ಯ ಮತ್ತಷ್ಟು ವಿಚಾರಣೆಗಾಗಿ ಆರೋಪಿಗಳ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ಪವನ್ ಮನೆಯಲ್ಲಿದ್ದ 30ಲಕ್ಷ ರೂ. ಸೀಝ್: ‘ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವನ್ ಮತ್ತು ನಿಖಿಲ್ ಅವರನ್ನು ಮಹಜರಿಗೆ ಒಳಪಡಿಸಿದ ಪೊಲೀಸರು, ನಗರದ ಬನಶಂಕರಿ 6ನೆ ಹಂತದಲ್ಲಿರುವ ಪವನ್ ಮನೆಗೆ ಇಬ್ಬರನ್ನೂ ಕರೆದೊಯ್ದು ಮನೆಯಲ್ಲಿದ್ದ 30ಲಕ್ಷ ರೂ. ಹಣವನ್ನು ಸೀಝ್ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ರೇಣುಕಾಸ್ವಾಮಿಯ ಕೊಲೆಯಾಗುತ್ತಿದ್ದಂತೆ ಆರೋಪಿ ರಾಘವೇಂದ್ರ, ನಿಖಿಲ್ ಸೇರಿ ನಾಲ್ವರಿಗೆ ಹತ್ಯೆ ಆರೋಪವನ್ನು ಒಪ್ಪಿಕೊಳ್ಳುವಂತೆ ಹೇಳಿ 30 ಲಕ್ಷ ರೂ. ಡೀಲ್ ಮಾಡಲಾಗಿತ್ತು. ಶರಣಾಗತಿಯಾದ ನಾಲ್ವರಿಗೆ ನೀಡಬೇಕಾಗಿದ್ದ 30 ಲಕ್ಷ ರೂ. ಹಣವನ್ನು ಪವನ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿತ್ತು. ಇದರಂತೆ ಇಬ್ಬರನ್ನು ಮಹಜರಿಗೆ ಕರೆದೊಯ್ದು 30 ಲಕ್ಷ ರೂ. ಹಣವನ್ನು ಸೀಝ್ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಸಾಕ್ಷಿ ನಾಶಕ್ಕೆ ಸಿದ್ಧತೆ: ‘ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ಆತ ಮೃತಪಟ್ಟಿರುವುದು ಖಚಿತವಾದ ನಂತರ ಸಾಕ್ಷಿ ನಾಶಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿರುವುದಾಗಿ ತಿಳಿದುಬಂದಿದೆ. ಪಟ್ಟಣಗೆರೆಯ ಶೆಡ್‍ನಿಂದ ರೇಣುಕಾಸ್ವಾಮಿಯ ಮೃತದೇಹವನ್ನು ಸುಮ್ಮನಹಳ್ಳಿಯ ರಾಜಕಾಲುವೆಯ ವರೆಗೂ ಸಾಗಿಸಿದ್ದ ಸ್ಕಾರ್ಪಿಯೋ ಕಾರನ್ನು ಸಂಪೂರ್ಣವಾಗಿ ಶುಚಿಗೊಳಿಸಿದ್ದರು. ಕಾರಿನ ಹಿಂಬದಿಯಲ್ಲಿದ್ದ ದರ್ಶನ್ ಸಿನಿಮಾದ ಸ್ಟಿಕ್ಕರ್, ‘ಡಿ ಬಾಸ್’ ಹೆಸರಿನ ಬರಹವನ್ನು ತೆಗೆದು ಹಾಕಿರುವುದು ತಿಳಿದು ಬಂದಿದೆ. ಸದ್ಯ ಆರೋಪಿಗಳು ಕಾರನ್ನು ಶುಚಿಗೊಳಿಸಿದ್ದ ವಾಶಿಂಗ್ ಸೆಂಟರಿನಿಂದಲೂ ಪೊಲೀಸರು ಕೆಲ ಸಾಕ್ಷಿಗಳನ್ನು ಕಲೆ ಹಾಕಿರುವುದಾಗಿ ಮೂಲಗಳು ತಿಳಿಸಿವೆ.

ದರ್ಶನ್ ಮನೆಯಲ್ಲಿ ಪರಿಶೀಲನೆ: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‍ನನ್ನು ಆರ್.ಆರ್. ನಗರದಲ್ಲಿರುವ ಆತನ ಮನೆಗೆ ಕರೆದೊಯ್ದ ಪೊಲೀಸರು ಸುಮಾರು 45 ನಿಮಿಷಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಜೂ.8ರ ಶನಿವಾರ ರಾತ್ರಿ ಪಟ್ಟಣಗೆರೆ ಶೆಡ್‍ನಿಂದ ಮನೆಗೆ ಬಂದು ಬಿಚ್ಚಿದ ಬಟ್ಟೆ, ಬಳಸಿದ ವಸ್ತುಗಳು, ಸ್ನಾನಕ್ಕೆ ಬಳಸಿದ್ದ ಟವಲ್, ಸೋಪು, ಬಕೆಟ್‍ನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News