ಮಣಿಪುರದಲ್ಲಿ ಶಾಂತಿ ಸ್ಥಾಪಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಮನವಿ

Update: 2023-08-06 18:41 GMT

ಬೆಂಗಳೂರು, ಆ.6: ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಪುನಃ ಸ್ಥಾಪಿಸಲು ತಕ್ಷಣವೇ ತಂಡವನ್ನು ಕಳುಹಿಸಬೇಕು, ಸಾಧ್ಯವಾದರೆ ನಿಯಮವನ್ನು ಮುರಿದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕೆಂದು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಠ ಜಾತಿಗಳ ಒಕ್ಕೂಟದ ರಾಜ್ಯ ಸಮಿತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರ ನೀಡಿದೆ.

ರವಿವಾರ ನಗರದ ಕೆ.ಆರ್.ವೃತ್ತದಲ್ಲಿರುವ ಅಲುಮ್ನಿ ಸಭಾಂಗಣದಲ್ಲಿ ಒಕ್ಕೂಟದ ವತಿಯಿಂದ ಮಣಿಪುರ ಜನಾಂಗೀಯ ದ್ವೇಷ, ಕೌರ್ಯ, ಕಗ್ಗೊಲೆ, ಮಹಿಳೆಯರ ಮೇಲೆ ಅನಾಗರಿಕ ಅತ್ಯಾಚಾರ ವಿರೋಧಿಸಿ ನಡೆದ ಖಂಡನಾ ಸಭೆಯಲ್ಲಿ ಚಿಂತಕ ಶಿವಸುಂದರ್ ಮಾತನಾಡಿ, ಮಣಿಪುರದ ಉದ್ವಿಗ್ನತೆಯನ್ನು ನಾವೆಲ್ಲರೂ ಅಂತಃಕರಣದಿಂದ ಕಾಣಬೇಕಿದೆ. ದೇಶದಲ್ಲಿ ಕಾನೂನು ವ್ಯವಸ್ಥೆ ಕುಸಿದು ಬಿದ್ದಿದ್ದು, ಮಣಿಪುರದ ಪ್ರಸ್ತುತ ಘಟನೆಗಳು ಕೇವಲ ಆ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಸಾಮಾಜಿಕ ಅಸ್ಥಿರತೆ, ಅಶಾಂತಿ ಮತ್ತು ಅಭದ್ರತೆಯನ್ನು ಸೃಷ್ಟಿಸಿದೆ ಎಂದರು.

ಮಣಿಪುರದಂತಹ ಒಂದು ರಾಜ್ಯದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಇಂತಹ ಭೀಕರ ಘಟನೆಗಳು ನಡೆಯಲು ರಾಜ್ಯವೇ ಅವಕಾಶ ನೀಡುತ್ತಿದೆಯೇ ಎಂಬ ಅನುಮಾನಗಳು ಮತ್ತು ಪ್ರಶ್ನೆಗಳನ್ನು ಇಂದು ಹುಟ್ಟುಹಾಕುತ್ತದೆ. ಗಾಂಧಿಯವರ ದೊಡ್ಡ ಪ್ರಜಾಪ್ರಭುತ್ವ ಮತ್ತು ಅಹಿಂಸೆ ಎರಡೂ ಹೆಸರುಗಳು ಕೋಮುವಾದಿ ಶಕ್ತಿಗಳಿಂದ ಕಳಂಕಿತವಾಗಿದ್ದು, ಈ ಕೋಮುವಾದಿ ಗೂಂಡಾಗಳು ಮತ್ತು ಕೊಲೆಗಡುಕರ ಮೇಲೆ ತಕ್ಷಣ ಕ್ರಮ ಜರುಗಿಸಬೇಕು ಎಂದು ಶಿವಸುಂದರ್ ಒತ್ತಾಯಿಸಿದರು.

ಅನಪೇಕ್ಷಿತ ಪರಿಸ್ಥಿತಿಯಿಂದಾಗಿ ಮಣಿಪುರ ರಾಜ್ಯದ ಭವಿಷ್ಯಕ್ಕೆ ಧಕ್ಕೆ ಉಂಟಾಗುವುದನ್ನು ತಳ್ಳಿಹಾಕುವಂತಿಲ್ಲ. ಅಲ್ಲದೆ, ರಾಜ್ಯ ಮತ್ತು ಸರಕಾರಗಳು ನಿಷ್ಕ್ರಿಯವಾಗಿ ಮುಂದುವರಿದರೆ, ಈ ಎಲ್ಲ ಘಟನೆಗಳು ಭವಿಷ್ಯದಲ್ಲಿ ಭಾರತದ ಇತರೆ ರಾಜ್ಯಗಳಲ್ಲಿ ಪರಿಣಾಮ ಬೀರುವುದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಶಿವಸುಂದರ್ ಹೇಳಿದರು.

ದಲಿತ ಮುಖಂಡ ಎನ್.ವೆಂಕಟೇಶ್ ಮಾತನಾಡಿ, ಮಣಿಪುರದ ಪರಿಸ್ಥಿತಿಯನ್ನು ಹತೋಟಿಗೆ ತರಲು ವಿಫಲರಾದ ಎಸ್ಪಿ, ಐಪಿಎಸ್, ಐಎಎಸ್, ಸ್ಥಳೀಯ ಪೊಲೀಸ್ ಅಧಿಕಾರಿಗಳು ಇತ್ಯಾದಿ ನಿರ್ವಾಹಕರ ವಿರುದ್ಧ ರಾಷ್ಟ್ರಪತಿಯವರು ಗಂಭೀರ ಕ್ರಮ ತೆಗೆದುಕೊಳ್ಳಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ತುರ್ತು ಆಧಾರದ ಮೇಲೆ ಆಶ್ರಯ ಮತ್ತು ರಕ್ಷಣೆ ನೀಡಬೇಕು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News