ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉಲಮಾಗಳ ಪಾತ್ರ ಮಹತ್ತರವಾದದ್ದು: ಮೌಲಾನ ಶಬ್ಬೀರ್ ನದ್ವಿ

Update: 2023-08-16 17:03 GMT

ಬೆಂಗಳೂರು, ಆ.16: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉಲಮಾಗಳು, ಮದ್ರಸಾಗಳು ನಿರ್ವಹಿಸಿದ ಪಾತ್ರ ಅತ್ಯಂತ ಮಹತ್ತರವಾದದ್ದು ಎಂದು ನಾಸಿಹ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಮೌಲಾನ ಸೈಯದ್ ಶಬ್ಬೀರ್ ನದ್ವಿ ಹೇಳಿದರು.

ನಗರದ ಲಿಂಗರಾಜಪುರಂನಲ್ಲಿರುವ ಬಿಬಿಎಂಪಿ ಆಟದ ಮೈದಾನದಲ್ಲಿ ನಾಸಿಹ್ ಪಬ್ಲಿಕ್ ಶಾಲೆ ವತಿಯಿಂದ ಆಯೋಜಿಸಲಾಗಿದ್ದ 77ನೆ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಹೋರಾಟಕ್ಕೆ ಉಲಮಾಗಳು ನೀಡಿದ ಕರೆಯಿಂದಾಗಿ ಕ್ರಾಂತಿಯೆ ಉಂಟಾಯಿತು. ಪ್ರತಿಯೊಬ್ಬರಲ್ಲೂ ಹೋರಾಟದ ಕಿಚ್ಚನ್ನು ಹಚ್ಚುವಲ್ಲಿ ಉಲಮಾಗಳು ಯಶಸ್ವಿಯಾದರು. ಅಷ್ಟೇ ಅಲ್ಲದೆ, ದೇಶವನ್ನು ಗುಲಾಮಗಿರಿಯಿಂದ ಪಾರು ಮಾಡಲು ಸಾವಿರಾರು ಮಂದಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು ಎಂದು ಅವರು ಹೇಳಿದರು.

ದೇಶಕ್ಕಾಗಿ ನಮ್ಮ ಪೂರ್ವಿಕರು ಮಾಡಿರುವ ತ್ಯಾಗ, ಬಲಿದಾನವನ್ನು ಇಂದಿನ ಯುವ ಪೀಳಿಗೆಗೆ ಅರ್ಥ ಮಾಡಿಸುವ ಅಗತ್ಯವಿದೆ. ಶಾಲಾ ಹಂತದಲ್ಲೆ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸುವುದರಿಂದ ದೇಶದ ಐಕ್ಯತೆಯನ್ನು ಮತ್ತಷ್ಟು ಪ್ರಬಲಗೊಳಿಸಬಹುದು ಎಂದು ಸೈಯದ್ ಶಬ್ಬೀರ್ ನದ್ವಿ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿವೃತ್ತ ಐಪಿಎಸ್ ಅಧಿಕಾರಿ ಯು.ನಿಸಾರ್ ಅಹ್ಮದ್, ಎನ್ನೆಸೆಸ್ ಅಧಿಕಾರಿ ಡಾ.ಪೂರ್ಣಿಮಾ ಪಾಲ್ಗೊಂಡಿದ್ದರು. ಪ್ರೀ ಕೆಜಿಯಿಂದ 10ನೆ ತರಗತಿಯವರೆಗಿನ ವಿದ್ಯಾರ್ಥಿಗಳು ವಿವಿಧ ಬಗೆಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪೋಷಕರು ಹಾಗೂ ಅತಿಥಿಗಳನ್ನು ರಂಜಿಸಿದರು.


 



Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News