ಗೋದಾಮಿನಲ್ಲಿ ಕಾರ್ಮಿಕರ ಮೇಲೆ ಮೆಕ್ಕೆಜೋಳದ ಚೀಲಗಳ ಕುಸಿತ; ಚೀಲದಡಿಯಲ್ಲಿ ಸಿಲುಕಿರುವ 10ಕ್ಕೂ ಹೆಚ್ಚು ಕಾರ್ಮಿಕರು
ವಿಜಯಪುರ : ಇಲ್ಲಿನ ಖಾಸಗಿ ಗೋದಾಮಿನಲ್ಲಿ ಮೆಕ್ಕೆಜೋಳ ತುಂಬಿದ್ದ ಚೀಲಗಳು ಕುಸಿದು ಸುಮಾರು 10 ಕ್ಕೂ ಹೆಚ್ಚು ಕಾರ್ಮಿಕರು ಚೀಲದ ಅಡಿಯಲ್ಲಿ ಸಿಲುಕಿರುವ ಘಟನೆ ವರದಿಯಾಗಿದೆ. ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಉಳಿದ ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಕತ್ತಲು ಆವರಿಸಿರುವುದರಿಂದ ಕಾರ್ಯಚರಣೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ.
ಸೋಮವಾರ ಸಂಜೆ ಬಿಹಾರ ಮೂಲದ ಕಾರ್ಮಿಕರು ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್ ಗೋದಾಮಿನಲ್ಲಿ ಧಾನ್ಯಗಳ ಚೀಲಗಳನ್ನು ಜೋಡಿಸುವ ಕೆಲಸ ಮಾಡುತಿದ್ದರು. ಒಮ್ಮೆಲೇ ಮೆಕ್ಕೆಜೋಳ ತುಂಬಿದ ಚೀಲಗಳು ಕುಸಿದು, ಕಾರ್ಮಿಕರ ಮೇಲೆ ಬಿದ್ದಿದೆ. ಸುಮಾರು ಹತ್ತಕ್ಕೂ ಹೆಚ್ಚು ಬಿಹಾರ ಮೂಲದ ಕಾರ್ಮಿಕರು ಕುಸಿದ ಚೀಲಗಳ ಅಡಿಯಲ್ಲಿ ಸಿಲುಕಿದ್ದು, ಜೀವನ್ಮರಣದೊಂದಿಗೆ ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಕಾರ್ಮಿಕರು ತಿಳಿಸಿದ್ದಾರೆ.
ರಕ್ಷಣೆ ಕಾರ್ಯಾಚರಣೆಯಲ್ಲಿ ಚೀಲಗಳ ಮಧ್ಯೆ ಸೊಂಟದವರೆಗೆ ಸಿಲುಕಿದ್ದ ಮೂವರು ಕಾರ್ಮಿಕರು ಪತ್ತೆಯಾಗಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, 3 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. 5 ಜೆಸಿಬಿ ಯಂತ್ರಗಳ ಸಹಾಯದಿಂದ ಕಾರ್ಮಿಕರ ರಕ್ಷಿಸುವ ಕಾರ್ಯಾಚರಣೆ ನಡೆದಿದೆ.
5 ಅಂಬ್ಯುಲೆನ್ಸ್ ಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಅವಘಡ ಸಂಭಸಿರುವ ಗೋದಾಮಿನಲ್ಲಿ ಭಾರಿ ಪ್ರಮಾಣ ಧಾನ್ಯ ತುಂಬಿರುವ ಚೀಲಗಳನ್ನು ಜೋಡಿಸಿಟ್ಟಿದ್ದು, ಕಾರ್ಯಾಚರಣೆ ವೇಳೆ ಮತ್ತೆ ಕುಸಿಯುವ ಭೀತಿ ಇದೆ. ಆ ಕಾರಣಕ್ಕೆ ಕಾರ್ಯಚರಣೆಗೆ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ.