ಪ್ರಚೋದನಕಾರಿ ಭಾಷಣ: ತಲೆ ಮರೆಸಿಕೊಂಡ ಬಜರಂಗದಳ ನಾಯಕ ರಘು ಬಂಧನಕ್ಕೆ ಪೊಲೀಸರ ಶೋಧ

Update: 2023-07-01 14:38 GMT

ಆರೊಪಿ ರಘು

ಸಕಲೇಶಪುರ: 'ಮುಸ್ಲಿಮರು ತರಕಾರಿ, ಮೀನು ಮಾರಾಟ ಮಾಡಲು ಬಂದರೆ ಗುಂಡು ಹಾರಿಸುವ ಬೆದರಿಕೆ ಹಾಕಿ, ಪ್ರಚೋದನಕಾರಿಭಾಷಣ ಮಾಡಿದ ಬಜರಂಗದಳ ನಾಯಕ, ರೌಡಿಶೀಟರ್ ರಘು ಬಂಧನಕ್ಕೆ ಪೋಲಿಸರು ಶೋಧ ನಡೆಸುತ್ತಿದ್ದು, ಈತ ತಲೆ ಮರೆಸಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೋಲಿಸರನ್ನು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. ಆರೋಪಿ ತಾಲೂಕು ಬಿಟ್ಟು ಹೊರ ಹೋಗದಂತೆ ನಾಕಬಂದಿ ಹಾಕಲಾಗಿದೆ. 

"ಕೋಮುಭಾವನೆ ಕೆರಳಿಸುವ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ಸಕಲೇಶಪುರದ ರಘು ಹಾಗೂ ಸಹಚರರ ವಿರುದ್ದ ನಮ್ಮ ಪೊಲೀಸರು ಸುಮೋಟೋ (ಸ್ವಯಂ ಪ್ರೇರಿತರಾಗಿ )ಕೇಸು ದಾಖಲಿಸಿಕೊಂಡಿದ್ದಾರೆ. ಎಲ್ಲರೂ ಊರು ಬಿಟ್ಟಿದ್ದಾರೆ. ಧರ್ಮದ ಹೆಸರಲ್ಲಿ ಸಮಾಜದಲ್ಲಿ ಅಶಾಂತಿ ಕದಡುವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಶೀಘ್ರವೇ ಬಂಧಿಸಲಾಗುವುದು"

- ಹರಿರಾಂ ಶಂಕರ್ ಎಸ್ಪಿ, ಹಾಸನ

ಘಟನೆ ವಿವರ: ಗೋ ಹತ್ಯೆ ತಡೆಯುವಲ್ಲಿ ಪೋಲಿಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಸಕಲೇಶಪುರ ಪಟ್ಟಣದಲ್ಲಿ ಶುಕ್ರವಾರ (ಜೂ.30) ನಡೆದ ಬಜರಂಗದಳದ ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡ ರಘು, ''ತರಕಾರಿ, ಮೀನು ಮಾರಾಟ ಮಾಡಲು ಹಿಂದೂಗಳ ಮನೆಯ ಬಳಿ ಬರುವಂತ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ, ಇಲ್ಲಾಂದ್ರೆ ನಮ್ಮಲ್ಲಿರುವ ಕೋವಿಯೊಳಗಿನ ಗುಂಡು ಹೊರಗಡೆ ಬರುತ್ತೆ, ನಾವು ಕೂಡ ಗುಂಡು ಹಾರಿಸಬೇಕಾಗುತ್ತದೆ'' ಎಂದು ಬೆದರಿಕೆ ಹಾಕಿದ್ದ. 

ಅಲ್ಲದೇ, 'ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚಿಗೆ ಮಾತನಾಡುತ್ತಾ ಆದಳ ಈ ದಳ ಎಂದು ಹೇಳಿದ್ದಾರೆ, ನೇರವಾಗಿ ಬಜರಂಗದಳ ಎಂದು ಹೇಳಲಿ, ಆಗ ನಾವು ನಮ್ಮ ಬಜರಂಗದಳದ ತಾಕತ್ತು ತೋರಿಸುತ್ತೇವೆ' ಎಂದು ಸವಾಲು ಹಾಕಿದ್ದ.

ಈತನ ಈ ಪ್ರಚೋದನಕಾರಿ ಭಾಷಣದ ತುಣುಕು ಕೆಲವು ಮಾದ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಕನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News