ವಿನೇಶ್ ಫೋಗಟ್ ಅನರ್ಹತೆ | ಮರು ಪರಿಶೀಲಿಸಲು ಸಾಲುಮರದ ತಿಮ್ಮಕ್ಕ ಮನವಿ

Update: 2024-08-08 14:25 GMT

ಸಾಲುಮರದ ತಿಮ್ಮಕ್ಕ/ವಿನೇಶ್‌ ಪೋಗಟ್‌(PTI)

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಅವರ ತೂಕದಲ್ಲಿ 100 ಗ್ರಾಂ ಹೆಚ್ಚಳವಾಗಿರುವ ಕಾರಣಕ್ಕೆ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿರುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ರಾಜ್ಯ ಸರಕಾರದ ಪರಿಸರ ರಾಯಭಾರಿ ಡಾ.ಸಾಲುಮರದ ತಿಮ್ಮಕ್ಕ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ಯಾರಿಸ್ ಒಲಿಂಪಿಕ್ಸ್ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿರುವ ನಿರ್ಧಾರ ಸರಿಯಿಲ್ಲ. ಈಗಾಗಲೆ, ಹಲವು ಸುತ್ತುಗಳನ್ನು ಗೆದ್ದು ಆಕೆ ಫೈನಲ್‍ಗೆ ಪ್ರವೇಶಿಸಿರುವ ಸಂದರ್ಭದಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಾಗಿದೆ ಎಂಬ ಕಾರಣ ನೀಡಿ ಸ್ಪರ್ಧೆಯಿಂದ ಅನರ್ಹಗೊಳಿಸಿರುವುದು ನ್ಯಾಯ ಸಮ್ಮತವಲ್ಲ ಎಂದು ಹೇಳಿದ್ದಾರೆ.

ವಾತಾವರಣ, ಊಟೋಪಚಾರದ ಕಾರಣಗಳಿಂದಾಗಿ ತೂಕ ಹೆಚ್ಚಳವಾಗಿರಬಹುದು. ಆದುದರಿಂದ, ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಆಕೆಯ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು. ಒಬ್ಬ ವ್ಯಕ್ತಿ ತನ್ನ ಜೀವನದ ಅತ್ಯಂತ ಕಠಿಣ ಪರಿಶ್ರಮದಿಂದ ಒಲಿಂಪಿಕ್ಸ್ ವೇದಿಕೆಗೆ ಬರಲು ಸಾಧ್ಯ. ಮರವನ್ನು ಒಂದು ಕ್ಷಣದಲ್ಲಿ ಕತ್ತರಿಸಿ ಹಾಕಬಹುದು. ಆದರೆ, ಆ ಮರವನ್ನು ಬೆಳೆಸಲು ಹಲವು ವರ್ಷಗಳೇ ಬೇಕಾಗುತ್ತದೆ. ಅದೇ ರೀತಿ ವಿನೇಶ್ ಫೋಗಟ್ ಪ್ರಕರಣವಾಗಿದೆ ಎಂದು ಸಾಲುಮರದ ತಿಮ್ಮಕ್ಕ ಉಲ್ಲೇಖಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯಗೊಂಡ ನಂತರ, ನಾನು ನಿಮ್ಮನ್ನು ನಮ್ಮ ಮನೆಗೆ ರಾಗಿ ಮುದ್ದೆ ಸವಿಯನ್ನು ಆಹ್ವಾನಿಸುತ್ತೇನೆ. ಅಲ್ಲದೆ, ಆಲದ ಮರದ ಸಸಿಯನ್ನು ನಮ್ಮ ಗೌರವದ ಸಂಕೇತವಾಗಿ ನೀಡಲು ಬಯಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News