ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Update: 2024-11-03 13:52 GMT

ಗುರುಪ್ರಸಾದ್‌ PC: x.com/RitamAppKannada 

ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ, ನಟ ಗುರುಪ್ರಸಾದ್ (52) ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಇಲ್ಲಿನ ಮಾದನಾಯಕಹಳ್ಳಿಯಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು, ನಾಲ್ಕೈದು ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆಯಿಂದ ಸುತ್ತಮುತ್ತಲಿನ ಮನೆಯ ನಿವಾಸಿಗಳಿಗೆ ಕೆಟ್ಟ ವಾಸನೆ ಬಂದ ಹಿನ್ನೆಲೆ ಅಪಾರ್ಟಮೆಂಟ್‌ನ ನಿರ್ವಹಣಾ ಸಮಿತಿ ಸದಸ್ಯರು ಪರಿಶೀಲನೆ ಮಾಡಿದಾಗ ಗುರುಪ್ರಸಾದ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆನಂತರ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮೂಲತಃ ರಾಮನಗರ ಜಿಲ್ಲೆ ಕನಕಪುರ ಮೂಲದವರಾದ ಗುರುಪ್ರಸಾದ್, 2006ರಲ್ಲಿ ಬಿಡುಗಡೆಯಾದ ‘ಮಠ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ನಿರ್ದೇಶಕರಾಗಿ ಪ್ರವೇಶ ಪಡೆದರು. 2009ರಲ್ಲಿ ‘ಎದ್ದೇಳು ಮಂಜುನಾಥ' ಸಿನಿಮಾ ನಿರ್ದೇಶಿಸಿದರು. ಈ ಚಿತ್ರವೂ ಭಾರಿ ಯಶಸ್ಸು ಗಳಿಸಿತು.

‘ಎದ್ದೇಳು ಮಂಜುನಾಥ' ಸಿನಿಮಾಗೆ ಬೆಸ್ಟ್ ಡೈರೆಕ್ಟರ್ ಫಿಲ್ಮ್‌ ಫೇರ್ ಪ್ರಶಸ್ತಿ ಬಂದಿತ್ತು. ಇವೆರಡೂ ಚಿತ್ರದಲ್ಲಿ ಜಗ್ಗೇಶ್ ನಾಯಕರಾಗಿ ನಟಿಸಿದ್ದರು. ಜತೆಗೆ, ಮಠ ಜಗ್ಗೇಶ್ ಅವರ 100ನೇ ಚಿತ್ರವಾಗಿ ಹೊರಹೊಮ್ಮಿತ್ತು. ಹೀಗೆ, 18 ವರ್ಷದ ತಮ್ಮ ಸಿನಿಮಾ ವೃತ್ತಿ ಬದುಕಿನಲ್ಲಿ ಗುರುಪ್ರಸಾದ್ 5 ಚಿತ್ರಗಳನ್ನು ನಿರ್ದೇಶಿಸಿದ್ದರು. 2024ರಲ್ಲಿ ರಂಗನಾಯಕ ಸಿನೆಮಾ ನಿರ್ದೇಶಿಸಿದ್ದರು. ಜತೆಗೆ, ಈ ಮಧ್ಯೆ ಹಲವು ಸಿನೆಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಮಠ, ಎದ್ದೇಳು ಮಂಜುನಾಥ, ಹುಡುಗರು, ಜಿಗರ್‌ ಥಂಡಾ, ಅನಂತು ವರ್ಸಸ್ ನುಸ್ರತ್, ಬಡವ ರಾಸ್ಕಲ್, ಮೈಲಾರಿ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದರು. ಹಾಗೇ, ಗುರುಪ್ರಸಾದ್ ಕಿರುತೆರೆಯಲ್ಲೂ ಸಕ್ರಿಯರಾಗಿದ್ದರು. ಹಲವು ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದರು. ಗುರುಪ್ರಸಾದ್ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಸಾಲಗಾರರ ಕಿರುಕುಳ?: ಇತ್ತೀಚಿಗೆ ತೆರೆಕಂಡ ರಂಗನಾಯಕ ಸಿನಿಮಾ ಅಷ್ಟಾಗಿ ಹಣ ಗಳಿಕೆ ಮಾಡದ ಕಾರಣ ಗುರುಪ್ರಸಾದ್ ಸಾಲದ ಶೂಲಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಜತೆಗೆ, ಸಾಕಷ್ಟು ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದ್ದರು. ಸಾಲ ನೀಡಿದ ವ್ಯಕ್ತಿಗಳಿಂದ ನಿರಂತರ ಕಿರುಕುಳ ನೀಡಿದ್ದ ಕಾರಣದಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳ ಕೇಳಿಬಂದಿವೆ.

‘ಸೃಜನಶೀಲ ನಿರ್ದೇಶಕರು ಹಾಗೂ ಕನಕಪುರ ಮೂಲದವರೇ ಆದ ಗುರುಪ್ರಸಾದ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಗಿದೆ. ಬೆಳ್ಳಿತೆರೆ ಹಾಗೂ ಕಿರುತೆರೆಗೆ ತಮ್ಮದೆ ಶೈಲಿಯ ಕೊಡುಗೆ ನೀಡಿದ ಗುರುಪ್ರಸಾದ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರು ಹಾಗೂ ಆತ್ಮೀಯರ ನೋವಿನಲ್ಲಿ ನಾನೂ ಭಾಗಿ’

-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

 Full View

  

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News