ಸಾಣೇಹಳ್ಳಿ ಸ್ವಾಮೀಜಿಗೆ ದೇವರ ತಂಟೆ ಬೇಡ: ವಿಶ್ವೇಶ್ವರ ಭಟ್‌

Update: 2023-11-04 11:07 GMT

ಬೆಂಗಳೂರು: ʼʼಗಣಪತಿಯನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲʼʼ ಎಂಬ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌, ʼʼಸಾಣೇಹಳ್ಳಿ ಸ್ವಾಮೀಜಿಗೆ ದೇವರ ತಂಟೆ ಬೇಡʼʼ ಎಂದು ಹೇಳಿದ್ದಾರೆ. 

ಇತ್ತೀಚೆಗೆ ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯಲ್ಲಿ ಮಾತನಾಡಿದ್ದ ಶಿವಾಚಾರ್ಯ ಸ್ವಾಮೀಜಿ, ʼʼವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣಪತಿಯನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ. ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕುʼʼ ಎಂದು  ಹೇಳಿದ್ದರು. 

ಅಲ್ಲದೇ,ʼʼಗಣಪತಿ ಸ್ತುತಿಸುವುದು ಮೌಢ್ಯದ ಆಚರಣೆ, ವಚನ ಪ್ರಸ್ತುತ ಪಡಿಸುವುದು ನಿಜವಾದ ಪ್ರಾರ್ಥನೆ. ಶಿವಕುಮಾರ ಸ್ವಾಮೀಜಿ ಕಾರ್ಯಕ್ರಮಗಳ ಆರಂಭದಲ್ಲಿ ವಚನಗಳನ್ನು ಹಾಡಬಹುದು ಎಂದು ತೋರಿಸಿದ್ದಾರೆʼʼ ಎಂದು ಶಿವಾಚಾರ್ಯ ಸ್ವಾಮೀಜಿ ಹೇಳಿದ್ದರು. 

ಈ ಬಗ್ಗೆ X ನಲ್ಲಿ ಪ್ರತಿಕ್ರಿಯಿಸಿರುವ ವಿಶ್ವೇಶ್ವರ ಭಟ್‌, ʼʼಸ್ವಾಮೀಜಿಗಳಾದವರು ಇಂಥ ಉಪದ್ವ್ಯಾಪಿ ಮತ್ತು ಅನರ್ಥಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಜನರ ನಂಬಿಕೆಗಳಿಗೆ ಧಕ್ಕೆ ತರುವ ಹುಡುಗಾಟಿಕೆ ಶೋಭೆ ತರುವುದಿಲ್ಲ. ಸಾಣೇಹಳ್ಳಿ ಸ್ವಾಮೀಜಿ ನಾಟಕ ಮಾಡಿಕೊಂಡು ಆರಾಮಿರಲಿ. ದೇವರ ತಂಟೆ ಬೇಡʼʼ ಎಂದು ಬರೆದುಕೊಂಡಿದ್ದಾರೆ. 

ಇನ್ನು ವಿಶ್ವೇಶ್ವರ ಭಟ್‌ ಅವರ ಟ್ವೀಟ್‌ ಗೆ ಕೆಲವರುಸಹಮತ ವ್ಯಕ್ತಪಡಿಸಿದರೆ,  ಇನ್ನೂ ಕೆಲವರು ʼʼದೇವರ ತಂಟೆ ಬೇಡ ಅನ್ನೋಕೆ ದೇವರು ಯಾರೊಬ್ಬರ ಪಿತ್ರಾರ್ಜಿತ ಸಂಪತ್ತೇ?ʼʼ ಎಂದು ಪ್ರಶ್ನೆ ಮಾಡಿದ್ದಾರೆ. 

ʼʼಸ್ವಾಮೀಜಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವುದು ಜನರಿಗೆ ಬಿಟ್ಟದ್ದುʼʼ ಎಂದು ಮಂಜುನಾಥ್‌ ಎಂಬವರು ಪ್ರತಿಕ್ರಿಯಿಸಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News