ರಾಜ್ಯ ಬಜೆಟ್ 2023-24 | ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣ ಅನ್ಯ ಕಾರ್ಯಕ್ಕೆ ಬಳಸದಂತೆ ‘7-ಡಿ’ ರದ್ದು

Update: 2023-07-07 17:46 GMT

ಬೆಂಗಳೂರು, ಜು.7: ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಕಾಯ್ದೆ-2013(ಎಸ್‍ಸಿಎಸ್‍ಪಿ/ಟಿಎಸ್‍ಪಿ)ರ ಸೆಕ್ಷನ್ 7(ಡಿ)ಅನ್ನು ದಲಿತ ಸಂಘಟನೆಗಳು ಮತ್ತು ಚಿಂತಕರ ಬಹುದಿನಗಳ ಒತ್ತಾಯದ ಅನ್ವಯ ಪ್ರಸಕ್ತ ಬಜೆಟ್‍ನಲ್ಲಿ ರದ್ದು ಮಾಡಲಾಗಿದೆ. ಯೋಜನೆಗೆ ಹಂಚಿಕೆಯಾಗುವ ಅನುದಾನ ಆ ಸಮುದಾಯಗಳ ಅಭಿವೃದ್ಧಿಗೆ ಬಳಕೆಯಾಗಲು ಈ ಕ್ರಮವನ್ನು ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

‘ಹಿಂದಿನ ಸರಕಾರ ಮಂಡಿಸಿದ್ದ ಆಯವ್ಯಯದಲ್ಲಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ಯೋಜನೆಗೆ ಹಂಚಿಕೆ ಮಾಡಿದ್ದ 30,215ಕೋಟಿ ರೂ.ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಈಗಿನ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ 24,333ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ 9,960 ಕೋಟಿ ರೂ.ಸೇರಿದಂತೆ ಒಟ್ಟಾರೆ 34,294 ಕೋಟಿ ರೂ.ಗಳಿಗೆ ಹೆಚ್ಚಿಸಿ, 4,079ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ನೀಡಲಾಗಿದೆ ಎಂದು ಬಜೆಟ್ ಮಂಡನೆ ವೇಳೆ ಅವರು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಹತ್ತು ಕ್ರೈಸ್ ವಸತಿ ಶಾಲೆಗಳಲ್ಲಿ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗೂ ಉತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯವನ್ನು ಒದಗಿಸಲು ತಲಾ ಎರಡು ಕೋಟಿ ರೂ.ಗಳಂತೆ ಒಟ್ಟು 20ಕೋಟಿ ರೂ. ನೀಡಲಾಗಿದೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ವಿಶ್ವದಲ್ಲಿ 250ರೊಳಗೆ ಯುನಿರ್ವಸಿಟಿ ರ್ಯಾಂಕಿಂಗ್ ಹೊಂದಿರುವ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಕೈಗೊಳ್ಳುವ ಸಲುವಾಗಿ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯಕ್ಕೆ ಅನುಗುಣವಾಗಿ ವ್ಯಾಸಂಗದ ಸಂಪೂರ್ಣ ವೆಚ್ಚವನ್ನು ಸರಕಾರದ ವತಿಯಿಂದ ಭರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ 36 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ(ಐಎಸ್‍ಇಸಿ)ನಲ್ಲಿ ಪಿಎಸ್‍ಡಿ ಮಾಡುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಡಾ.ಅಂಬೇಡ್ಕರ್ ಫೆಲೋಶಿಪ್ ನೀಡಲು 2ಕೋಟಿ ರೂ.ಕಾರ್ಪಸ್ ನಿಧಿಯನ್ನು ನೀಡಲಾಗುವುದು. ‘ಸ್ವಾವಲಂಬಿ ಸಾರಥಿ’ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲದ ಶೇ.75 ರಷ್ಟು, ಗರಿಷ್ಠ ನಾಲ್ಕು ಲಕ್ಷ ರೂ. ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಯೋಜನೆಯನ್ನು ಕೈಗೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಎರಡು ಕೋಟಿ ರೂ.ವರೆಗೆ ಸರಕಾರದಿಂದ ಸಮಾನಾಂತರ ಖಾತ್ರಿ ನೀಡುವ ಯೋಜನೆ ಜಾರಿಯಲ್ಲಿದ್ದು, ಸಮಾನಾಂತರ ಖಾತ್ರಿಯನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಪಡೆಯುವ ಸಾಲಕ್ಕೂ ವಿಸ್ತರಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಜನರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ(ಇಡಿಪಿ) ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಒಂದು ಲಕ್ಷ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿಗಳಿಗೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ವಾಣಿಜ್ಯ ಬ್ಯಾಂಕ್‍ಗಳಿಂದ ಪಡೆಯುವ ಸಾಲಕ್ಕೆ ಗರಿಷ್ಠ ಶೇ.20ರಷ್ಟು ಅಥವಾ ಒಂದು ಲಕ್ಷ ರೂ.ಗಳು ಮೀರದಂತೆ ಸಾಲ ಸಹಾಯಧನ ನೀಡಲಾಗುವುದು.

ಚರ್ಮ ಆಧಾರಿತ ಸಾಂಪ್ರದಾಯಿಕ ಕುಶಲಕರ್ಮಿಗಳ ಕುಟುಂಬಗಳ 100 ಯುವಜನರಿಗೆ ಚರ್ಮ ಉದ್ಯಮದಲ್ಲಿನ ಹೊಸ ತಂತ್ರಜ್ಞಾನಗಳು, ವಿನ್ಯಾಸಗಳು ಹಾಗೂ ಮಾರುಕಟ್ಟೆಯ ಬೇಡಿಕೆಗಳಿಗೆ ಪರಿಚಯಿಸಲು ಚರ್ಮ ಆಧಾರಿತ ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಾದ ದೆಹಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತರಬೇತಿ ಪಡೆಯಲು ಕಳುಹಿಸಲಾಗುವುದು.

ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿರಿಯ ನಾಗರಿಕರ ಆರೈಕೆ ಮತ್ತು ನೆರವಿಗಾಗಿ ವೃದ್ಧಾಶ್ರಮಗಳನ್ನು ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿ (ಅಖಅ) ಮತ್ತು ಎನ್‍ಜಿಓಗಳ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಅರಣ್ಯ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಾಗಿ ಬುಡಕಟ್ಟು ಪ್ರದೇಶಗಳಲ್ಲಿ 100 ಅರಣ್ಯ ಉತ್ಪನ್ನ ಘಟಕಗಳನ್ನು ಟ್ರೈಫೆಡ್ ಸಮನ್ವಯದಲ್ಲಿ ಸ್ಥಾಪಿಸಲಾಗುವುದು.

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವನ್ನು ದೌರ್ಜನ್ಯ ತಡೆ ಅಧಿನಿಯಮದಡಿ ರಕ್ಷಣಾ ಕೋಶವನ್ನಾಗಿ ಘೋಷಿಸಲಾಗಿದೆ. ಈ ಕೋಶವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮವಹಿಸಲಾಗುವುದು.

ಪರಿಶಿಷ್ಟ ಪಂಗಡಗಳ ಜನಾಂಗದಲ್ಲಿ ಸೋಲಿಗ ಸಮುದಾಯ ಒಳಗೊಂಡಂತೆ ಜೇನುಕುರುಬ, ಕಾಡುಕುರುಬ, ಕೊರಗ, ಇರುಳಿಗ, ಬೆಟ್ಟಕುರುಬ ಇತ್ಯಾದಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 11 ಬುಡಕಟ್ಟು ಪಂಗಡಗಳಾದ ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ, ಸಿದ್ಧಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟಕುರುಬ ಜನಾಂಗದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಯೋಜನೆಯನ್ನು ವಾರ್ಷಿಕ ಆರು ತಿಂಗಳುಗಳಿಗೆ ನೀಡಲಾಗುತ್ತಿದ್ದು, ಇದನ್ನು 12 ತಿಂಗಳಿಗೆ ವಿಸ್ತರಿಸಲಾಗುವುದು. ಇದಕ್ಕೆ ವಾರ್ಷಿಕವಾಗಿ 50 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News