ಕಾರ್ಮಿಕ ಕಲ್ಯಾಣ ಮಂಡಳಿಯಿಂದ 7 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ: ಸಚಿವ ಸಂತೋಷ್ ಲಾಡ್

Update: 2023-11-04 17:39 GMT

ದಾವಣಗೆರೆ, ನ.4: ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ ವಿತರಣೆಗೆ ಇದೇ ತಿಂಗಳ 9 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ತಿಳಿಸಿದರು.

ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯಮಿದಾರರೊಂದಿಗೆ ನಡೆಸಿದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಸಚಿವರು, ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಾರ್ಮಿಕರ ಮಕ್ಕಳು ವಿದ್ಯಾರ್ಥಿವೇತನಕ್ಕೆ ಸಲ್ಲಿಸಿದ ಅರ್ಜಿಗಳಲ್ಲಿ ಈ ಹಿಂದಿನ 7 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಈ ಪ್ರಕ್ರಿಯೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು

ಒಂದು ಸಾವಿರ ಕೋಟಿ ರೂ. ಸೆಸ್‌ ಸಂಗ್ರಹ

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ1.82 ಕೋಟಿ ಕಾರ್ಮಿಕರು ನೋಂದಣಿಯಾಗಿದ್ದಾರೆ. ಮಂಡಳಿಯಿಂದ ರೂ.6,500 ಕೋಟಿ ಸೆಸ್ ಸಂಗ್ರಹ ಆಗಬೇಕಿದ್ದು, ಆದರೆ, ಪ್ರತಿ ವರ್ಷ ಅಂದಾಜು ರೂ.1,000 ಕೋಟಿಯಷ್ಟು ಸೆಸ್ ಸಂಗ್ರಹವಾಗುತ್ತಿದೆ. ಇದರಲ್ಲಿ ರೂ. 800 ಕೋಟಿ ರಷ್ಟು ಸರ್ಕಾರದ ವಲಯದಿಂದ ಸಂಗ್ರಹವಾದರೆ, ಖಾಸಗಿ ವಲಯದಿಂದ ರೂ. 200 ಕೋಟಿ ಮಾತ್ರ ಸೆಸ್ ಸಂಗ್ರಹವಾಗುತ್ತಿದೆ. ವಿದ್ಯಾರ್ಥಿವೇತನ, ಮದುವೆ, ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಕನಿಷ್ಠ ರೂ. 3000 ಕೋಟಿ ಬೇಕಾಗುತ್ತದೆ ಎಂದು ಹೇಳಿದರು.

'ಕಲ್ಯಾಣ ಮಂಡಳಿ ಉಳಿಸಿ ಬೆಳೆಸಲು ಹೊಸ ಕಾನೂನು'

ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಉಳಿಸಿ ಬೆಳೆಸುವ ಮೂಲಕ ಇದರ ಸಾಮರ್ಥ್ಯವನ್ನು ಇನ್ನೂ ಹೆಚ್ಚಿಸಲು ಹೊಸ ಕಾನೂನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಹೊಸ ಅಪ್ಲಿಕೇಶನ್‌ ಬಿಡುಗಡೆ ಮಾಡಲಾಗುತ್ತದೆ. ಹೊಸ ಟೆಕ್ನಾಲಜಿಯಿಂದ ಎಲ್ಲ ಮಾಹಿತಿಯು ಸಂಗ್ರಹವಾಗಲಿರುವುದರಿಂದ ಸೆಸ್ ಸಂಗ್ರಹ ಮತ್ತು ನಿರ್ವಹಣೆ ಸುಲಭವಾಗಲಿದೆ ಎಂದರು.

'ಮನೆ ಕೆಲಸ, ಗಿಗ್ ನೌಕರರಿಗೆ ಕಲ್ಯಾಣ ಕಾರ್ಯಕ್ರಮ'

ಮನೆ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು ಮತ್ತು ವಿವಿಧ ಇ-ಕಾಮರ್ಸ್‍ನಲ್ಲಿ ಕೆಲಸ ಮಾಡುವವರಿಗೆ ಗಿಗ್ ಕಾರ್ಮಿಕರೆಂದು ಕರೆಯಲಾಗುತ್ತದೆ. ಇವರಿಗೂ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಲಾಗಿದ್ದು, ಮನೆ ಕೆಲಸದ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಆಸ್ತಿ ತೆರಿಗೆಯಲ್ಲಿ ಸೆಸ್ ಸಂಗ್ರಹಿಸುವ ಮೂಲಕ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶವಿದ್ದು, ಈ ವರ್ಷದಲ್ಲಿ ಅನುಷ್ಟಾನಕ್ಕೆ ತರುವ ವಿಶ್ವಾಸವಿದೆ ಎಂದು ಹೇಳಿದರು.

'ಹಮಾಲರ ನಿವೃತ್ತಿ ವಯಸ್ಸು ಏರಿಕೆಗೆ ಕ್ರಮ'

ಎಪಿಎಂಸಿಗಳಲ್ಲಿ ಕೆಲಸ ಮಾಡುವ ಹಮಾಲರಿಗೆ 60 ವರ್ಷದ ನಂತರ ಅವರ ಪರವಾನಗಿಯನ್ನು ನವೀಕರಣ ಮಾಡಲಾಗುತ್ತಿಲ್ಲ, ಇದರಿಂದ ಅವರಿಗೆ ಯಾವುದೇ ಜೀವನ ನಿರ್ವಹಣಾ ದುಡಿಮೆ ಇಲ್ಲದಿರುವುದರಿಂದ ವಯೋಮಿತಿ ಹೆಚ್ಚಿಸಬೇಕೆಂದಾಗ ಈ ವಯಸ್ಸನ್ನು 65 ವರ್ಷಗಳಿಗೆ ಏರಿಕೆ ಮಾಡಲು ಪರಿಶೀಲನೆ ನಡೆಸಲಾಗುತ್ತದೆ ಎಂದು ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ಸಮಾಲೋಚನಾ ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮದ್ ಮೊಹಸೀನ್, ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಡಿ.ಭಾರತಿ, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಉದ್ಯಮಿದಾರರು ಉಪಸ್ಥಿತರಿದ್ದರು.

'ಚಿಂದಿ ಆಯುವವರಿಗೆ ಒಣಕಸ ನೀಡಿ'

ಚಿಂದಿ ಆಯುವವರ ಬದುಕು ದುಸ್ತರವಾಗಿದ್ದು, ನಗರಸಭೆಯಿಂದ ಸಂಗ್ರಹವಾಗುವ ಒಣಕಸವನ್ನು ಚಿಂದಿ ಆಯುವವರಿಗೆ ನೀಡಬೇಕೆಂದು ಗೀತಮ್ಮ ಎಂಬುವರು ಪ್ರಸ್ತಾಪಿಸಿದಾಗ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಮುಂದೆ ಬರಲು ಸಚಿವರು ತಿಳಿಸಿದರು

'ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ'

ಕಾರ್ಮಿಕ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಅವರಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಬೇಕೆಂದು ಸಾಕಷ್ಟು ಕಾರ್ಮಿಕ ಸಂಘಟನೆಗಳ ಒತ್ತಾಯವಾಗಿದೆ. ಹಾಗಾಗಿ ಪ್ರತಿ ತಿಂಗಳು ವೇತನ ಸಹಿತ ಒಂದು ದಿನ ಮುಟ್ಟಿನ ರಜೆಯನ್ನು ನೀಡುವ ಬಗ್ಗೆ ಪ್ರಸ್ತಾವನೆ ಇದೆ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು.

'ಕಾರ್ಮಿಕರಿಗಾಗಿ ಟೋಲ್ ಫ್ರೀ'

ಕಾರ್ಮಿಕರ ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆಯನ್ನು ಆರಂಭಿಸಲಾಗುತ್ತಿದ್ದು, ಕನಿಷ್ಠ ವೇತನವನ್ನು ಜಾರಿಗೊಳಿಸಲಾಗಿದೆ. ಕಾರ್ಮಿಕರಿಗೆ ಟೋಲ್ ಫ್ರೀ ಸಂಖ್ಯೆಯಿಂದ ಪರಿಹಾರ, ತಾತ್ಕಾಲಿಕ ಸಹಾಯ ಮತ್ತು ಕುಂದುಕೊರತೆಗಳ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು

'ಸಿನಿ ಕಾರ್ಮಿಕರಿಗೆ ಕಾನೂನು':

'ಚಲನಚಿತ್ರ, ಕಿರುತೆರೆ, ಚಿತ್ರಮಂದಿರಗಳಲ್ಲಿ ಕೆಲಸ ಮಾಡುವವರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಜಾರಿಗೆ ಇವರಿಗೆ ಪ್ರತ್ಯೇಕ ಕಾನೂನು ರೂಪಿಸಲಾಗುವುದು'

- ಸಂತೋಷ್‌ ಲಾಡ್‌, ಕಾರ್ಮಿಕ ಸಚಿವರು

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News