ಶಾಲೆ, ಅಂಗನವಾಡಿ ಕೇಂದ್ರದ ಕೊಳವೆ ಬಾವಿ ನೀರು ಕಲುಷಿತ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2023-11-23 15:20 GMT

ಬೆಂಗಳೂರು: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ಖಾಸಗಿ ಕಂಪೆನಿಯೊಂದರ ರಾಸಾಯನಿಕ ಗೊಬ್ಬರ ಸಂಗ್ರಹಗಾರಕ್ಕೆ ಹೊಂದಿಕೊಂಡಿರುವ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಕೊಳವೆಬಾವಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಸ್ಥಳೀಯ ನಿವಾಸಿ ಪಾಂಡುರಂಗ ಮಹದೇವ ಕಾಂಬ್ಳೆ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಇದೊಂದು ಸಾರ್ವಜನಿಕ ಮಹತ್ವದ ಗಂಭೀರ ವಿಚಾರ. ಅರ್ಜಿ ಸಂಬಂಧ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ, ರಾಯಬಾಗ ತಹಶೀಲ್ದಾರ್ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ, 2024ರ ಜ.8ಕ್ಕೆ ವಿಚಾರಣೆ ಮುಂದೂಡಿತು.

ಗಂಗಾ ಕಾವೇರಿ ಗೋದಾವರಿ ಫರ್ಟಿಲೈಸರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ರಾಸಾಯನಿಕ ಗೊಬ್ಬರ ಸಂಗ್ರಹಗಾರ(ಗೋದಾಮಿ) ಕಳೆದ ಏಳು ವರ್ಷಗಳಿಂದ ಹುಬ್ಬರವಾಡಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಗೋದಾಮಿನ ಕಾಂಪೌಂಡ್‍ಗೆ ಹೊಂದಿಕೊಂಡು ಸರಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಇದೆ. ಇದರಲ್ಲಿ 500 ಮಕ್ಕಳು ಕಲಿಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಗೋದಾಮಿನ ಹತ್ತಿರವೇ ಸಾರ್ವಜನಿಕ ಬೋರ್‍ವೆಲ್ ಇದೆ. ಹುಬ್ಬರವಾಡಿ ಗ್ರಾಮ ಮತ್ತು ಶಾಲೆಗೆ ಅದು ಏಕೈಕ ನೀರಿನ ಮೂಲವಾಗಿದೆ. ಗೋದಾಮಿಗೆ ಪ್ರತಿನಿತ್ಯ ಭಾರಿ ಸರಕು ವಾಹನಗಳು ಬಂದು ಹೋಗುತ್ತವೆ. ಗೋದಾಮಿನ ಆವರಣದಲ್ಲಿ ರಾಸಾಯನಿಕಗಳು ಚೆಲ್ಲುವುದರಿಂದ ಗೋದಾಮಿನಲ್ಲಿ ಬಳಸುವ ಮತ್ತು ಲಾರಿ ಚಾಲಕರು ಸ್ನಾನ ಮಾಡುವ ನೀರಿನೊಂದಿಗೆ ಆ ರಾಸಾಯನಿಕಗಳು ಕೊಳವೆಬಾವಿ ನೀರಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅರ್ಜಿ ವಿಚಾರಣೆ ಮುಗಿಯುವ ತನಕ ಗೋದಾಮಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News