ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ತನಿಖೆಗೆ ವಿಶೇಷ ತಂಡ ರಚನೆ
ಬೆಂಗಳೂರು: ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 60 ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ವಿಶೇಷ ತಂಡವನ್ನು ರಚಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.
ನುರಿತ ಸೈಬರ್ ಪೊಲೀಸರು, ಆಯಾ ಸ್ಥಳೀಯ ಠಾಣೆಗಳ ಪೊಲೀಸರು ಹಾಗೂ ಸೈಬರ್ ತಜ್ಞರು, ಈ ಹಿಂದೆ ಬಂದಿದ್ದ ಹುಸಿ ಬಾಂಬ್ ಬೆದರಿಕೆಯ ಇಮೇಲ್‍ಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಿಡಿಗೇಡಿಗಳು ಬೆದರಿಕೆಗೆ ಬಳಸಲಾದ ಇಮೇಲ್ ಸಂದೇಶ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಪತ್ತೆ ಹಚ್ಚಲು ಇಮೇಲ್‍ನ ಐಡಿ ಅಡ್ರೆಸ್ ಟ್ರೇಸ್ ಮಾಡುತ್ತಿದ್ದಾರೆ. ಈಗಾಗಲೇ ಪೊಲೀಸರು ಸರ್ವರ್ ಫ್ರೋವೈಡರ್ ಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಇಮೇಲ್ ರಿಜಿಸ್ಟ್ರೇಷನ್, ಲಾಗಿನ್ ಐಡಿ ಮಾಹಿತಿ, ಇಮೇಲ್ ಡ್ರಾಫ್ಟ್ ಮಾಹಿತಿ, ಸೆಂಡ್ ಫೋಲ್ಡರ್ ಮತ್ತು ಇಮೇಲ್ ಚಾಟ್ ಹಿಸ್ಟರಿ ಸೇರಿದಂತೆ ಇನ್ನಿತರ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ಗೂಗಲ್ ಸಂಸ್ಥೆಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎಂದಿನಂತೆ ತರಗತಿಗಳು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 60 ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಶುಕ್ರವಾರ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆ, ಶಾಲೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಬಗ್ಗೆ ಸರಕಾರ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದು, ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದ ಶಾಲೆಗಳು ಶನಿವಾರ ತೆರೆದಿದ್ದು, ಎಂದಿನಂತೆ ತರಗತಿಗಳು ನಡೆದವು.
ಈ ಪ್ರಕರಣ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಪೂರ್ಣಪ್ರಜ್ಞ ಶಾಲೆಯ ಶಿಕ್ಷಕಿ ಕವಿತಾ, ‘ಬಾಂಬ್ ಬೆದರಿಕೆ ಸಂದೇಶ ಬಂದಿದ್ದರಿಂದ ಶುಕ್ರವಾರ ಆತಂಕ ಉಂಟಾಗಿತ್ತು. ಜಾಗೃತರಾಗಿ ಎಚ್ಚರಿಕೆ ವಹಿಸಿ ಮಕ್ಕಳನ್ನು ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದೆವು. ಶನಿವಾರ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಾಲೆಯ ವತಿಯಿಂದ ಆಶ್ವಾಸನೆ ನೀಡಲಾಗಿತ್ತು. ಆದ್ದರಿಂದ ಮಕ್ಕಳು ನಿರಾತಂಕವಾಗಿ ಬಂದು ತರಗತಿಗಳನ್ನು ನಡೆಸಿದೆವು. ಈ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಪೋಷಕರ ಸಹಕಾರ ಬಹಳಷ್ಟಿದೆ. ಆದರೆ ಈ ರೀತಿಯ ಬೆದರಿಕೆ ಸಂದೇಶ ಆತಂಕ ತರುವ ವಿಚಾರವಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ದುಃಖಕರ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಕೂಡ ಸಂಪೂರ್ಣ ತನಿಖೆ ಕೈಗೊಂಡು ಪ್ರಕರಣ ಪತ್ತೆಹಚ್ಚಿ ಪರಿಹಾರ ಸೂಚಿಸಬೇಕು. ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕಡಿವಾಣ ಹಾಕಬೇಕು’ ಎಂದು ಹೇಳಿದರು.