ಹಿರಿಯ ವಕೀಲ ಎ.ಜಿ.ಶಿವಣ್ಣ ನಿಧನ
ಬೆಂಗಳೂರು, ಅ.18: ಕರ್ನಾಟಕ ಹೈಕೋರ್ಟ್‍ನ ಹಿರಿಯ ವಕೀಲರು, ಈ ಹಿಂದೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿದ್ದವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಚಾಲಕರು ಮತ್ತು ಬೆಂಗಳೂರು ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಅಳಶೆಟ್ಟಿಕೆರೆ ಗಂಗಣ್ಣ ಶಿವಣ್ಣ(68) ಬುಧವಾರ ಬೆಳಗಿನ ಜಾವ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರು ಮತ್ತು ಹೈಕೋರ್ಟ್ ವಕೀಲರೂ ಆದ ಪುತ್ರ ಅಮರ್ ಅವರನ್ನು ಅಗಲಿದ್ದಾರೆ.
ಸಹೋದ್ಯೋಗಿಗಳ ಜೊತೆ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಮಹಾಬಲೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಬುಧವಾರ ಬೆಳಗಿನ ಜಾವ 3 ರಿಂದ 4 ಗಂಟೆ ವೇಳೆಯಲ್ಲಿ ತೀವ್ರ ಹೃದಯಾಘಾತಕ್ಕೆ ಈಡಾಗಿ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಅಮರ್ ತಿಳಿಸಿದ್ದಾರೆ.
ಅಂತ್ಯಸಂಸ್ಕಾರ ಗುರುವಾರ(ಅ.19) ಬೆಳಗ್ಗೆ ತುಮಕೂರು ತಾಲೂಕಿನ ಕುಣಿಗಲ್ ರಸ್ತೆಯ ನಾಗವಲ್ಲಿ ಬಳಿಯ ಕೋಡಿ ಮುದ್ದನಹಳ್ಳಿ ತೋಟದಲ್ಲಿ ನೆರವೇರಲಿದೆ ಎಂದು ಅಮರ್ ಹೇಳಿದ್ದಾರೆ.
ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದ್ದ ಶಿವಣ್ಣ ಲೇಖಕರೂ ಆಗಿದ್ದರು. ಭೂ ಸುಧಾರಣೆ ಸಂಬಂಧಿತ ಕಾನೂನುಗಳಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದರು.
‘ಪಹಣಿ ಪತ್ರಿಕೆ ಮತ್ತು ಗೇಣಿ(ಸಾಗುವಳಿ) ಪತ್ರಗಳ ಕಾನೂನಿನ ಒಂದು ಪರಿಚಯ’, ‘ಕಾಮೆಂಟರಿ ಆನ್ ಲ್ಯಾಂಡ್ ರೆವಿನ್ಯೂ ಆ್ಯಕ್ಟ್ಟ್’, ‘ಕರ್ನಾಟಕ ಲ್ಯಾಂಡ್ ಗ್ರ್ಯಾಬಿಂಗ್ ಆ್ಯಕ್ಟ್ಟ್’, ‘ಕರ್ನಾಟಕ ಕೋರ್ಟ್ ಫೀ ಆ್ಯಕ್ಟ್’, ‘ಕನ್ವರ್ಷನ್ ಆಫ್ ಅಗ್ರಿಕಲ್ಚರ್ ಲ್ಯಾಂಡ್’ ಮತ್ತು ‘ರೈಟ್ಸ್ ಆಫ್ ಅಕ್ಯೂಸ್ಡ್’ ಸೇರಿದಂತೆ ಕಾನೂನು ಸಂಬಂಧಿತ ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲಿμïನಲ್ಲಿ ರಚಿಸಿದ್ದಾರೆ. ಇವರ ಪುಸ್ತಕಗಳನ್ನು ‘ಕರ್ನಾಟಕ ಲಾ ಪಬ್ಲಿಷರ್ಸ್’ ಪ್ರಕಟಿಸಿದೆ.
ಸಹಕಾರ ಸಂಘಗಳ ಚುನಾವಣಾ ಅಧಿಕಾರಿಯಾಗಿಯೂ ಜನಪ್ರಿಯರಾಗಿದ್ದ ಶಿವಣ್ಣ, ಬೆಂಗಳೂರು ವಕೀಲರ ಸಂಘ, ಮಹಿಳಾ ವಕೀಲರ ಸಂಘ, ನ್ಯಾಯಮಿತ್ರ ಸಹಕಾರ ಬ್ಯಾಂಕ್‍ಗಳ ಚುನಾವಣಾ ಪ್ರಕ್ರಿಯೆಯಲ್ಲಿನ ಹಲವು ಸುಧಾರಣೆಗೆ ಕಾರಣಕರ್ತರಾಗಿದ್ದರು.
‘ವಕೀಲರ ಆತ್ಮೀಯರು, ಕಿರಿಯರಿಗೆ ಮಾರ್ಗದರ್ಶಕರೂ ಮತ್ತು ಕಾನೂನಿನ ಕನ್ನಡ ಬಳಕೆ ಬಗ್ಗೆ ಅಪಾರ ಆಸ್ಥೆ ವಹಿಸಿದ್ದ ಶಿವಣ್ಣ ನಗುಮುಖದ ಸೌಮ್ಯ ಸ್ವಭಾವದ ಸ್ನೇಹ ಜೀವಿಯಾಗಿದ್ದರು. ಅವರ ಅಕಾಲಿಕ ಸಾವು ನಾಡಿನ ವಕೀಲ ವೃಂದಕ್ಕೆ ತುಂಬಲಾರದ ನಷ್ಟ’ ಎಂದು ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಮತ್ತು ಹಿರಿಯ ವಕೀಲ ರವಿವರ್ಮ ಕುಮಾರ್ ಸಂತಾಪ ಸೂಚಿಸಿದ್ದಾರೆ.