ಲೈಂಗಿಕ ದೌರ್ಜನ್ಯ ಪ್ರಕರಣ | ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

Update: 2024-07-22 16:39 GMT

ಸೂರಜ್ ರೇವಣ್ಣ

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಹಾಸನದ ಹೊಳೆನರಸೀಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಕೋರಿ ಸೂರಜ್ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಎರಡೂ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

2 ಲಕ್ಷ ರೂ.ಗಳ ಶ್ಯೂರಿಟಿ, ತನಿಖೆಗೆ ಸಹಕರಿಸಬೇಕು, ಪಾಸ್‍ ಪೋರ್ಟ್ ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು, ಆರೋಪ ಪಟ್ಟಿ ಸಲ್ಲಿಸುವವರೆಗೆ ಇಲ್ಲವೇ ಮುಂದಿನ ಆರು ತಿಂಗಳು ಕಾಲ ಪ್ರತಿ ಎರಡನೇ ಭಾನುವಾರ ಠಾಣೆಗೆ ಭೇಟಿ ನೀಡಿ ಸಹಿ ಮಾಡಬೇಕು, ಸಾಕ್ಷ್ಯಗಳಿಗೆ ಬೆದರಿಕೆ ಹಾಕಬಾರದು, ಸಾಕ್ಷಿಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡಬಾರದು ಎಂಬುದಾಗಿ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ವಿವರ: ಹೊಳೆನರಸೀಪುರದಲ್ಲಿರುವ ಫಾರ್ಮ್‍ಹೌಸ್‍ಗೆ ಜೂ.16ರಂದು ಕರೆಯಿಸಿಕೊಂಡು ಡಾ.ಸೂರಜ್ ರೇವಣ್ಣ ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಚಾರವನ್ನು ಬಹಿರಂಗಪಡಿಸಿದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಸಂಬಂಧ ಹಣದ ಆಮಿಷವನ್ನೂ ಒಡ್ಡಿದ್ದರು ಎಂದು ಸಂತ್ರಸ್ತ ಯುವಕನೊಬ್ಬ ಸೂರಜ್ ಮತ್ತು ಅವರ ಬೆಂಬಲಿಗ ಶಿವಕುಮಾರ್ ವಿರುದ್ಧ ಜೂ.22ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ಹೊಳೆನರಸೀಪುರ ಗ್ರಾಮೀಣ ಠಾಣೆಯಲ್ಲಿ ಸೂರಜ್ ಮತ್ತು ಶಿವಕುಮಾರ್ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‍ಗಳ ಅಡಿ ಎಫ್‍ಐಆರ್ ದಾಖಲಿಸಲಾಗಿತ್ತು. ಅಲ್ಲದೆ, ಸೂರಜ್ ಆಪ್ತ ಎನ್ನಲಾದ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಸೂರಜ್, ಚನ್ನರಾಯಪಟ್ಟಣದ ರಕ್ಷಿತ್ ಮತ್ತು ಹಾಸನದ ಸಚಿನ್ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿ ಜೂ.25ರಂದು ಹೊಳೆನರಸೀಪುರದ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ಎಫ್‍ಐಆರ್ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News