ಲೈಂಗಿಕ ದೌರ್ಜನ್ಯ ಪ್ರಕರಣ | ಜುಲೈ 1ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಗೆ

Update: 2024-06-24 16:25 GMT

ಸೂರಜ್‌ ರೇವಣ್ಣ

ಬೆಂಗಳೂರು : ಅಸಹಜ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ಸಂಬಂಧ ವಿಧಾನ ಪರಿಷತ್ತಿನ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಜುಲೈ 1ರ ವರೆಗೂ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜುಲೈ 1 ರವರೆಗೂ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದರು. ಆನಂತರ ನ್ಯಾಯಾಂಗ ಬಂಧನದಲ್ಲಿದ್ದ ಸೂರಜ್ ರೇವಣ್ಣ ಅವರನ್ನು ತನಿಖಾಧಿಕಾರಿಗಳು ಸಿಐಡಿ ಕಚೇರಿಗೆ ಕರೆದೊಯ್ದರು.

ಇದಕ್ಕೂ ಮೊದಲು ವಿಚಾರಣೆ ವೇಳೆ ಸರಕಾರದ ಪರ ವಕೀಲರು, ಹಾಸನದಲ್ಲಿ ಘಟನೆ ನಡೆದಿದ್ದು, ಅಲ್ಲಿಗೆ ಹೋಗಿ ಮಹಜರು ಮಾಡಬೇಕು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಹೀಗೆ, ಅನೇಕ ಪ್ರಕ್ರಿಯೆಗಳು ಬಾಕಿ ಉಳಿದಿವೆ. ಜತೆಗೆ, ಎರಡನೆ ಆರೋಪಿಯ ಬಂಧನ ಮಾಡಬೇಕು. ಹೀಗಾಗಿ 14 ದಿನ ಕಸ್ಟಡಿ ಬೇಕು ಎಂದು ವಾದ ಮಂಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸೂರಜ್ ರೇವಣ್ಣರ ಪರ ವಕೀಲರು, ಪ್ರಕರಣದಲ್ಲಿ ದೂರುದಾರ ಘಟನೆ ಆದಾಗ ದೂರು ನೀಡಿಲ್ಲ. ಬದಲಾಗಿ ತಡವಾಗಿ ದೂರು ನೀಡಲಾಗಿದೆ. ಒಂದೆರೆಡು ದಿನ ಸಿಐಡಿ ವಶಕ್ಕೆ ನೀಡಿದರೆ ಸಾಕು. ಆದರೆ, ವಿನಾಕಾರಣ ಕಿರುಕುಳ ನೀಡುವ ಉದ್ದೇಶದಿಂದ 14 ದಿನಗಳ ಕಾಲ ಸಿಐಡಿ ವಶಕ್ಕೆ ಕೇಳಲಾಗುತ್ತಿದೆ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News