ರಾಜ್ಯಕ್ಕೆ ಬರದ ಛಾಯೆ: 130 ತಾಲೂಕುಗಳು ಬರಪೀಡಿತವೆಂದು ಘೋಷಣೆ ಸಾಧ್ಯತೆ

Update: 2023-09-02 05:55 GMT

(PTI File Photo)

ಬೆಂಗಳೂರು, ಸೆ.2: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ 227 ತಾಲೂಕುಗಳ ಪೈಕಿ ಸುಮಾರು 130 ತಾಲೂಕುಗಳು ಬರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಜೂ.1 ರಿಂದ ಆ.31ರವರೆಗೆ ಸಾಮಾನ್ಯವಾಗಿ 691 ಮಿ.ಮೀ. ಮಳೆಯಾಗುತ್ತದೆ. ಆದರೆ, ಪ್ರಸಕ್ತ ಸಾಲಿನಲ್ಲಿ 497 ಮಿ.ಮೀ. ಮಳೆಯಾಗುವ ಮೂಲಕ ಶೇ.28ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್ ತಿಂಗಳಲ್ಲಿ 220 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 60 ಮಿ.ಮೀ. ಮಾತ್ರ ಮಳೆಯಾಗಿದೆ. ಆ ಮೂಲಕ ಆಗಸ್ಟ್‌ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.74ರಷ್ಟು ಮಳೆ ಕೊರತೆಯಾಗಿರುವುದು ಶತಮಾನದ ಇತಿಹಾಸದಲ್ಲಿ ಇದೇ ಮೊದಲು. 

ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಂತೆ 88 ಮಿ.ಮೀ. ಮಳೆಯಾಗಬೇಕು. ಆದರೆ, 22 ಮಿ.ಮೀ. ಮಾತ್ರ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ 118 ಮಿ.ಮೀ. ಮಳೆಯಾಗಬೇಕು. ಆದರೆ, 35 ಮಿ.ಮೀ. ಮಾತ್ರ ಮಳೆ ಯಾಗಿದೆ. ಮಲೆನಾಡು ಭಾಗದಲ್ಲಿ 420 ಮಿ.ಮೀ. ಮಳೆಯಾಗಬೇಕು. ಆದರೆ, 385 ಮಿ.ಮೀ. ಮಳೆಯಾಗಿದೆ. ಅದೇ ರೀತಿ, ಕರಾವಳಿ ಭಾಗದಲ್ಲಿ 823 ಮಿ.ಮೀ. ಮಳೆಯಾಗಬೇಕು. ಆದರೆ, 229 ಮಿ.ಮೀ. ಮಾತ್ರ ಮಳೆಯಾಗಿದೆ. ಹೀಗೆ ಒಟ್ಟಾರೆ ಆಗಸ್ಟ್‌ನಲ್ಲಿ ಶೇ.74ರಷ್ಟು ಮಳೆ ಕೊರತೆಯಾಗಿದೆ.

ಮುಂಗಾರು ಅವಧಿಗೆ ಒಟ್ಟು 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಆದರೆ, 66.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾದ ಪರಿಣಾಮವಾಗಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದವು. ಆದರೆ, ಆಗಸ್ಟ್ ನಲ್ಲಿ ಮಳೆ ಹಾಗೂ ತೇವಾಂಶದ ಕೊರತೆಯಿಂದ ಬೆಳೆಗಳು ನೀರಿಲ್ಲದೆ ಒಣಗುವಂತಾಗಿದೆ. 1.82 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಬಿತ್ತನೆಯಾ ಗಿದ್ದು, ಇದೇ ಅವಧಿಯ ವಾಡಿಕೆ ಬಿತ್ತನೆ (2.15 ಹೆಕ್ಟೇರ್)ಗೆ ಹೋಲಿಸಿ ದಲ್ಲಿ ಶೇ.65ರಷ್ಟು ಮಾತ್ರ ಬಿತ್ತನೆಯಾದಂತಾಗಿದೆ. 

ದಕ್ಷಿಣ ಕನ್ನಡದಲ್ಲಿ ಆತಂಕ

ಆಗಸ್ಟ್‌ನಲ್ಲಿ ರ್ಕಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಪ್ರಕಾರ, ದ.ಕ ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಶೇ.73 ವಾಡಿಕೆಯಂತೆ ಸುರಿಯಬೇಕಾಗಿದ್ದ 892 ಮಿ.ಮೀ. ಮಳೆಯ ಮಳೆ ಬದಲಿಗೆ ಸುರಿದಿರುವುದು ಕೇವಲ 239 ಮಿ.ಮೀ. ಮಾತ್ರ! (ಶೇ.73 ಕೊರತೆ! ಮಳೆ ಕೊರತೆ). ಜೂನ್ 1ರಿಂದ ಆ.31ರವರೆಗೆ ಜಿಲ್ಲೆಯಲ್ಲಿ 3,065ಮಿ.ಮೀ. ಮಳೆಯಾಗಬೇಕಿದ್ದು, ಸುರಿದಿರುವುದು 2,069 ಮಿ.ಮೀ. ಮಾತ್ರ. ಈ ಮೂಲಕ ಈ ಅವಧಿಯಲ್ಲಿ ಶೇ. 32ರಷ್ಟು ಮಳೆ ಕೊರತೆಯಾಗಿದೆ. ಜನವರಿಯಿಯಿಂದ ಆಗಸ್ಟ್ ವರೆಗಿನ ಲೆಕ್ಕಾಚಾರದ ಪ್ರಕಾರ 3,308 ಮಿ.ಮೀ. ಮಳೆಯ ಬದಲಿಗೆ ಆಗಿರುವುದು 2,188 ಮಿ.ಮೀ. ಮಾತ್ರ. ಈ ಅವಧಿಯಲ್ಲಿ ಶೇ.34ರಷ್ಟು ಮಳೆ ಕೊರತೆ ಜಿಲ್ಲೆಯಲ್ಲಿ ದಾಖಲಾಗಿದೆ. ದ.ಕ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ, ಫಲ್ಗುಣಿ, ನಂದಿನಿ, ಸೌಪರ್ಣಿಕ, ಕುಮಾರಧಾರ ನದಿಗಳು ತುಂಬಿ ಹರಿಯಬೇಕಾದರೆ ಚಾರ್ಮಾಡಿ, ಶಿರಾಡಿ, ಬಿಸಿಲೆಘಾಟಿಯಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಬೇಕು. ಆದರೆ ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಜೀವ ನದಿಗಳಲ್ಲಿ ನೀರಿನ ಒಳಹರಿವು ಆಗಸ್ಟ್ ತಿಂಗಳಲ್ಲಿಯೇ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಈ ಬಾರಿ ವರ್ಷಾಂತ್ಯದಲ್ಲೇ ಕುಡಿಯುವ ನೀರಿನ ಆತಂಕಕ್ಕೆ ಕಾರಣವಾಗಿದೆ. 

ಉಡುಪಿಯಲಿ ಶೇ.30ರಷ್ಟು ಕೊರತೆ

ಉಡುಪಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 1ರವರೆಗೆ ವಾಡಿಕೆ ಮಳೆ 3,830 ಮಿ.ಮೀ. ಸುರಿಯಬೇಕಿತ್ತು. ಆದರೆ ಈ ಬಾರಿ ಬಂದಿರುವುದು 2,680 ಮಿ.ಮೀ. ಮಾತ್ರ. ಅಂದರೆ ಶೇ.30ರಷ್ಟು ಮಳೆ ಕೊರತೆ ಇಂದಿನವರೆಗೆ ಕಂಡುಬಂದಿದೆ. ಬರೇ ಮಳೆಗಾಲದಲೆಕ್ಕಾಚಾರವನ್ನು ತೆಗೆದುಕೊಂಡರೂ (ಜೂ.1ರಿಂದ ಸೆ.1ರವರೆಗೆ) ಜಿಲ್ಲೆಯಲ್ಲಿ ವಾಡಿಕೆ 3,638 ಮಿ.ಮೀ. ಮಳೆಯಾಗಬೇಕಿದ್ದಲ್ಲಿ 2023ರಲ್ಲಿ ಬಂದಿರುವುದು 2,627 ಮಿ.ಮೀ. ಮಾತ್ರ. ಅಂದರೆ ಶೇ.28ರಷ್ಟು ಮಳೆ ಕೊರತೆಯಾಗಿದೆ. 

------------------------------------------------

'ಕೇದ್ರ ಸಮಾರ್ಗಸೂಚಿ ಆಂದ್ರ ಸರಕಾರ ರಚಿಸಿ ಗಳ ಅನ್ವಯವೇ ಬರ ಪೀಡಿತ ತಾಲೂಕು ಗಳ ಘೋಷಣೆಯನ್ನು ಮಾಡಬೇಕು. ಯಾವ ಯಾವ ತಾಲೂಕುಗಳು ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಎಂದು ಘೋಷಿಸಲು ಅರ್ಹವಾಗಿವೆ ಎಂದು ಗುರುತಿಸಲು ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಸೆ.4ರಂದು ನಡೆಯಲಿರುವ ಸಂಪುಟ ಉಪ ಸಮಿತಿ ಸಭೆಯಲ್ಲಿ ಒಟ್ಟು ಎಷ್ಟು ತಾಲೂಕುಗಳು ಬರಪೀಡಿತವಾಗಿವೆ ಎಂಬುದನ್ನು ಅಂತಿಮಗೊಳಿಸುತ್ತೇವೆ. ಆನಂತರ, ಕೇಂದ್ರ ಸರಕಾರಕ್ಕೆ ಬರ ಘೋಷಣೆ ಮಾಡುವಂತೆ ಕೋರಿ ಮನವಿ ಸಲ್ಲಿಸಲಾಗುವುದುʼ

ಕೃಷ್ಣಭೈರೇಗೌಡ, -ಕಂದಾಯ ಸಚಿವ

------------------------------------------------------------

ʼʼಬರ ಘೋಷಣೆಯಾದರೆ ನಿಮಗೆ ನೋಂದಣಿ ಮಾಡಿಸಿಕೊಳ್ಳದ ರೈತರಿಗೂ ಪರಿಹಾರ ಸಿಗುವ ಸಾಧ್ಯತೆಗಳಿ ರುತ್ತವೆ. ಪ್ರಸಕ್ತ ಸಾಲಿಗೆ 16.23 ಲಕ್ಷ ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿಸಿಕೊಂಡಿದ್ದು, 15.31 ಲಕ್ಷ ಹೆಕ್ಟೇರ್ ಬೆಳೆವಿಮೆ ವ್ಯಾಪ್ತಿಗೆ ಒಳಪಟ್ಟಿದೆ. 2023-24ನೇ ಸಾಲಿನಲ್ಲಿ ಪೂರ್ವ ಮುಂಗಾರು ಹಂಗಾಮಿನ ಸಮೀಕ್ಷೆ ಪೂರ್ಣಗೊಂಡಿದ್ದು, ಒಟ್ಟು 51.21 ಲಕ್ಷ ತಾಕುಗಳ ಪೈಕಿ 47.20 ಲಕ್ಷತಾಕು(ಕೃಷಿ ಭೂಮಿಯ ತುಂಡು)ಗಳ ಸಮೀಕ್ಷೆಯನ್ನು ಕೈಗೊಂಡು ಶೇ.92.15ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರಾರಂಭಗೊಂಡು ಒಟ್ಟು 121.34 ಲಕ್ಷ ತಾಕುಗಳ ಪೈಕಿ ಈವರೆಗೆ 21.22 ಲಕ್ಷ ತಾಕುಗಳ ಸಮೀಕ್ಷೆಕೈಗೊಂಡು ಶೇ.17.49ರಷ್ಟು ಪ್ರಗತಿ ಸಾಧಿಸಲಾಗಿದೆʼʼ

-  ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - -ಅಮ್ಜದ್ ಖಾನ್ ಎಂ.

contributor

Similar News