ಬಜೆಟ್ ಮಂಡನೆ ವೇಳೆ ವಿರೋಧ ಪಕ್ಷದ ನಾಯಕನಿಲ್ಲದಿರುವುದು ನಾಚಿಕೆಗೇಡು: ಎಚ್.ವಿಶ್ವನಾಥ್
ಮೈಸೂರು: ರಾಜ್ಯದ ಬಜೆಟ್ ಮಂಡನೆ ವೇಳೆ ವಿರೋಧ ಪಕ್ಷದ ನಾಯಕನಿಲ್ಲದಿದ್ದದ್ದು ನಾಚಿಕೆಗೇಡು. ಇದು ಬಿಜೆಪಿಯವರ ಅಸಂಘಟನೆ, ಅಸಹಾಯಕತೆಯನ್ನು ತೋರಿಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಇದೇ ಮೊದಲ ಬಾರಿಗೆ ಬಜೆಟ್ ಮಂಡನೆಯಾಗಿರುವುದು ನಾಚಿಕೆಗೇಡಿನ ಸಂಗತಿ. ಸದ್ಯ ಕುಮಾರಸ್ವಾಮಿಯೇ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ವಜನಾಂಗದ ಬಜೆಟ್ ಮಂಡನೆ ಮಾಡಿರುವುದು ಸ್ವಾಗತಾರ್ಹ, ಅನ್ನ,ಅಕ್ಷರ ದಾಸೋಹದ ಜೊತೆಗೆ, ಮಹಿಳಾ ಸಬಲೀಕರಣ, ಸಮಾಜ ಕಲ್ಯಾಣಕ್ಕೆ ಒತ್ತುಕೊಟ್ಟಿರುವುದು ಉತ್ತಮ ಬೆಳವಣಿಗೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಅನುದಾನ ನೀಡಿರುವುದು ಮೆಚ್ಚುವಂತದ್ದಾಗಿದೆ ಎಂದು ಹೇಳಿದರು.
ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಪಾಲಿಗೆ ಆಶಾದಾಯಕವಾಗಿದೆ. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚು ಪ್ರವಾಸ ಮಾಡುವುದರಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತದೆ. ಒಂದು ಕುಟುಂಬ ಯಾವುದಾದರೂ ಪ್ರವಾಸಿ ತಾಣ ಅಥವಾ ದೇವಸ್ಥಾನಕ್ಕೆ ಹೋದರೆ ಅರಿಶಿಣ, ಕುಂಕುಮ, ತೆಂಗಿನ ಕಾಯಿ, ಕಡ್ಲೆಪುರಿ, ಬಟ್ಟೆ ಸೇರಿದಂತೆ ಅನೇಕ ಪದಾರ್ಥಗಳನ್ನು ಕೊಂಡುಕೊಳ್ಳುತ್ತಾರೆ. ಇದರಿಂದ ಸಣ್ಣ ಪುಟ್ಟ ವ್ಯಾಪಾರ ಮಾಡುವವರ ಹೊಟ್ಟೆ ತುಂಬುತ್ತದೆ. ಜೊತೆಗೆ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದರು.
ಐದು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರು ಗ್ಯಾಸ್ ಬೆಲೆ ಹೆಚ್ಚಳವಾದಾಗ ಏಕೆ ವಿರೋಧಿಸಲಿಲ್ಲ, ಒಂದು ಸಿಲಿಂಡರ್ ಬೆಲೆ 1150 ರೂ.ಗಳಾದಾಗ ದೇಶಕ್ಕಾಗಿ ಕೊಟ್ಟರೆ ಏನು ಆಗಲ್ಲ ಎಂದ ದೇಶ ಭಕ್ತರು. ಗ್ಯಾಸ್ ಸಬ್ಸಿಡಿಯನ್ನು ದೇಶಕ್ಕಾಗಿ ಬೇಡ ಎಂದು ಬಿಡಿ ಎಂದು ಹೇಳಿದವರು ಈಗಲೂ ನಮಗೆ ಐದು ಗ್ಯಾರಂಟಿಗಳ ಸೌಲಭ್ಯ ಬೇಡ ಎಂದು ಹೇಳಿಬಿಡಿ ಎಂದು ತಿರುಗೇಟು ಕೊಟ್ಟರು.
ಸಿದ್ಧರಾಮಯ್ಯ ಅವರು ಐದು ಗ್ಯಾರಂಟಿಗಳನ್ನು ಜಾರಿಮಾಡಿದ್ದಾರೆ. ಇದರಲ್ಲಿ ವಿದ್ಯುತ್ ವಿಚಾರದಲ್ಲಿ ಸ್ವಲ್ಪ ಜಾಗರೂಕತೆಯಿಂದ ಮತ್ತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಏಕೆಂದರೆ ಕೆಇಬಿ ಮತ್ತು ಕೆಪಿಟಿಸಿಎಲ್ ಗಳಲ್ಲಿ ವಿದ್ಯುತ್ ಸೋರಿಕೆ ಬಹಳಷ್ಟಾಗುತ್ತಿದೆ. ಇದರ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಹೇಳಿದರು.