ಇನ್ನು ಒಂದು ತಿಂಗಳಷ್ಟೇ ಶಿವಮೊಗ್ಗ ಏರ್ ಪೋರ್ಟ್ ಕಾರ್ಯಾಚರಣೆ!

Update: 2024-09-04 06:37 GMT

ಶಿವಮೊಗ್ಗ: ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆಯಾದ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ನಡೆಸಲು ನೀಡಿರುವ ಪರವಾನಿಗೆ ಸೆಪ್ಟಂಬರ್ 23ಕ್ಕೆ ಮುಕ್ತಾಯವಾಗಲಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಪರವಾನಿಗೆಯನ್ನು ನವೀಕರಿಸಲು ವಿಫಲವಾದರೆ, ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಫೆಬ್ರವರಿ 27, 2023 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಶಿವಮೊಗ್ಗ ವಿಮಾನ ನಿಲ್ದಾಣವು ಆಗಸ್ಟ್ 23, 2023ರಂದು ವಿಮಾನ ಹಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈಗ ಬೆಂಗಳೂರು, ಗೋವಾ, ತಿರುಪತಿ ಮತ್ತು ಹೈದರಾಬಾದ್ಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನೇರ ವಿಮಾನ ಕಾರ್ಯಾಚರಣೆ ಮಾಡಲಾಗುತ್ತಿದೆ. ಡಿಜಿಸಿಎಯು ಆಗಸ್ಟ್ 23, 2024ರವರೆಗೆ ವಿಮಾನಗಳನ್ನು ನಿರ್ವಹಿಸಲು ಪರವಾನಿಗೆಯನ್ನು ನೀಡಿತ್ತು. ಮತ್ತೆ ಪರವಾನಿಗೆ ನವೀಕರಣ ಮಾಡುವಾಗ ಕೇವಲ ಒಂದು ತಿಂಗಳವರೆಗೆ ಮಾತ್ರ ನವೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಎಸ್ಐಐಡಿಸಿಯಿಂದ ನಿರ್ವಹಣೆ ಮಾಡುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯದಲ್ಲಿ ಮೊದಲನೆಯದು. ಡಿಜಿಸಿಎ ಪರವಾನಿಗೆ ನೀಡುವಾಗ ಸುರಕ್ಷತೆ ಮತ್ತು ಭದ್ರತೆಗೆ ಷರತ್ತುಗಳನ್ನು ಹಾಕಿತ್ತು. ಕೆಲವು ಷರತ್ತುಗಳನ್ನು ಪೂರೈಸದ ಕಾರಣ, ಡಿಜಿಸಿಎ ಒಂದು ವರ್ಷದವರೆಗೆ ಪರವಾನಿಗೆಯನ್ನು ನವೀಕರಿಸಲು ನಿರಾಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ರನ್ವೇ ಸುರಕ್ಷತಾ ಪ್ರದೇಶವು ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಡಿಜಿಸಿಎ ಹೇಳಿದೆ. ವಿಮಾನ ನಿಲ್ದಾಣಕ್ಕೆ ಬೇಕಾದ ರಕ್ಷಣಾ ಸಾಧನಗಳನ್ನು ಖರೀದಿಸುವಲ್ಲಿ ವಿಳಂಬವಾಗಿದೆ ಮತ್ತು ಅಗ್ನಿ ಸುರಕ್ಷತೆಯನ್ನು ನೋಡಿಕೊಳ್ಳಲು ಸಾಕಷ್ಟು ಉದ್ಯೋಗಿಗಳು ಇಲ್ಲ ಎಂಬುದನ್ನು ಉಲ್ಲೇಖಿಸಿ ಡಿಜಿಸಿಎ ಕೇವಲ ಒಂದು ತಿಂಗಳಿಗೆ ಪರವಾನಿಗೆ ನೀಡಿದೆ.

ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯ ಕೊರತೆ, ಕ್ವಿಕ್ ರಿಯಾಕ್ಷನ್ ಟೀಮ್ (ಕ್ಯೂಆರ್ಟಿ) ಇಲ್ಲದಿರುವುದು ಪರವಾನಿಗೆ ಮಿತಿಗೊಳಿಸಲು ಕಾರಣ ಎನ್ನಲಾಗಿದೆ. ಪರವಾನಿಗೆಯನ್ನು ನವೀಕರಿಸಲು ಈ ʼಕೊರತೆʼಗಳನ್ನು ಸರಿಪಡಿಸುವಂತೆ ಡಿಜಿಸಿಎಯು ಕೆಎಸ್ಐಐಡಿಸಿಗೆ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಡಿಜಿಸಿಎ ಲೈಸನ್ಸ್ ಸಿಗಲಿದೆ

ಫೈರ್ ಸೇಫ್ಟಿ ವಿಚಾರದಲ್ಲಿ ಅಗತ್ಯ ಸಿಬ್ಬಂದಿಯನ್ನು ಭರ್ತಿ ಮಾಡಲಾಗಿದೆ. ನೈಟ್ ಲ್ಯಾಂಡಿಂಗ್ ಸಮಸ್ಯೆಯೂ ಬಗೆಹರಿದಿದೆ. ಅಗತ್ಯ ಸುರಕ್ಷತಾ ಸಾಮಗ್ರಿಗಳಿವೆ. ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆಯಾದ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಲೈಸನ್ಸ್ ದೊರೆಯಲಿದೆ.

- ಸಿ.ಶಮಂತ್, ಶಿವಮೊಗ್ಗ ವಿಮಾನ ನಿಲ್ದಾಣ ವ್ಯವಸ್ಥಾಪಕರು,

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News