ಶಿವಮೊಗ್ಗ: ಗಲಭೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ

Update: 2023-10-03 09:27 GMT

ಶಿವಮೊಗ್ಗ(ಅ.03): ಗಲಭೆಪೀಡಿತ ಪ್ರದೇಶವಾದ ರಾಗಿಗುಡ್ಡಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ಪರಿಸ್ಥಿತಿ ಅವಲೋಕಿಸಿದರು.

ಕಲ್ಲು ತೂರಾಟಕ್ಕೊಳಗಾದ ಮನೆಗಳಿಗೆ ಭೇಟಿ ಒಡೆದು ಹೋಗಿದ್ದ ಕಿಟಕಿ ಗಾಜು, ಬಾಗಿಲು, ವಾಹನಗಳನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಎಸ್ಪಿ ಮಿಥುನ್‌ ಕುಮಾರ್ ಜೊತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ನೀಡಿದರು.

ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದಿದೆ.ಘಟನೆ ಸಂಬಂಧ 24 ಪ್ರಕರಣಗಳನ್ನು ದಾಖಲಿಸಿಕೊಂಡು 60 ಜನರನ್ನು ಬಂಧಿಸಲಾಗಿದೆ ಎಂದರು.

ಘಟನೆ ಆದ ದಿನ ಮಡಿಕೇರಿನಲ್ಲಿದ್ದೆ.ಅಲ್ಲಿಯೇ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ಅದ್ಧೂರಿಯಾಗಿ ನಡೆದಿದೆ.ಆದರೆ, ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದಿದೆ.ಈ ಘಟನೆ ನಡೆಯಬಾರದಿತ್ತು.ಘಟನೆ ನಡೆದಿರುವುದಕ್ಕೆ ನನಗೆ ವಿಷಾದವಿದೆ ಎಂದರು.

ಶಿವಮೊಗ್ಗದ ಹಿನ್ನೆಲೆ ಗಮನಿಸಿ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ವಿಧಿಸಲಾಗಿದೆ.ಆದರೆ, ರಾಗಿಗುಡ್ಡ ಹೊರತು ಪಡಿಸಿ ಬಾಕಿ ಕಡೆ ಸಡಿಲಗೊಳಿಸಲಾಗಿದೆ. ರಾಗಿಗುಡ್ಡದಲ್ಲಿ ಮತ್ತೆ ದ್ವೇಷದ ಹಿನ್ನೆಲೆಯಲ್ಲಿ ಯಾವ ಘಟನೆ ನಡೆಯಬಾರದು ಎಂದು ಸಿಯಕ್ಷನ್ ಬಿಗಿ ಮಾಡಲಾಗಿದೆ ಎಂದರು.

ಹೊರಗಿನಿಂದ ಬಂದವರು ಕಲ್ಲು ತೂರಾಟ ನಡೆಸಿದ್ದಾರೆಂಬುದರ ಬಗ್ಗೆ ನಾನು ಮಾತನಾಡಲ್ಲ.ಶಿವಮೊಗ್ಗ ಜನತೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಕಾನೂನುಬದ್ಧವಾಗಿರುವ ಬಂಟಿಂಗ್ಸ್, ಬ್ಯಾನರ್ ಗಳು ಅಳವಡಿಸಲು ಅವಕಾಶವಿದೆ.ಸಂಪ್ರದಾಯವಾಗಿ ಪ್ರದರ್ಶನ ಮಾಡುವ ಬಗ್ಗೆ ಯಾವುದೇ ವಿರೋಧವಿಲ್ಲ ಎಂದರು.

ರಾಗಿಗುಡ್ಡದಲ್ಲಿ ನಾನು ಕೆಲವಾರು ಮನೆಗಳಿಗೆ ಭೇಟಿ ನೀಡಿ ಒಡೆದು ಹಾಕಿದ್ದನ್ನು ನೋಡಿದೆ.ಇದನ್ನು ನೋಡಿದಾಗ ಬೇಸರವಾಗುತ್ತೆ.ನಮ್ಮ, ನಿಮ್ಮ ಮನೆಗಳನ್ನು ಒಡೆದಾಗ ಬೇಸರವಾಗುವುದಿಲ್ಲವಾ. ಪಾಪ ಕಷ್ಟಪಟ್ಟು ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಯಾರಿಂದಲೂ ಯಾರಿಗೂ ತೊಂದರೆಯಾಗಬಾರದು ಎಂದರು.

ಕೆಲವು ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ.ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಕಾನೂನಿನಲ್ಲಿ ಅವಕಾಶವಿದ್ರೆ ನಷ್ಟವಾದವರಿಗೆ ಪರಿಹಾರ ಕೊಡುತ್ತೇವೆ.ಇಲ್ಲವಾದರೆ ನಾವು ಸೇರಿ ಕೊಡ್ತೆವೆ.ಶಿವಮೊಗ್ಗ ಶಾಂತಿಯಿಂದ ಇರಬೇಕು.ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

 



 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News