ಶಿವಮೊಗ್ಗ | ಹುಣಸೋಡು ಸ್ಫೋಟ ಪ್ರಕರಣ: ಮರು ತನಿಖೆಗೆ ಹೈಕೋರ್ಟ್ ಆದೇಶ

Update: 2023-11-12 13:54 GMT

 ಹುಣಸೋಡು ಸ್ಫೋಟ- ಫೈಲ್ ಚಿತ್ರ

ಶಿವಮೊಗ್ಗ, ನ.12: ಇಡೀ ದೇಶದ ಗಮನ ಸೆಳೆದಿದ್ದ ಶಿವಮೊಗ್ಗ ಹುಣಸೋಡು ಸ್ಫೋಟ ಪ್ರಕರಣದ ಮರು ತನಿಖೆಗೆ ಹೈಕೋರ್ಟ್ ಆದೇಶ ಮಾಡಿದೆ.

ಸಿಇಎನ್ ಠಾಣೆಯ ಬದಲು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ತನಿಖೆಗೆ ಆದೇಶ ಮಾಡಿ ಚಾರ್ಚ್ ಶೀಟ್ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.

2021ರ ಜನವರಿ 21ರಂದು ರಾತ್ರಿ 10:20ಕ್ಕೆ ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಎಂಬಲ್ಲಿ ಸ್ಫೋಟ ಸಂಭವಿಸಿತ್ತು. ಎಸ್.ಎಸ್. ಕ್ರಷರ್ ಕ್ವಾರಿಯಲ್ಲಿ ಸ್ಫೋಟಕ ತುಂಬಿದ ಕ್ಯಾಂಟರ್ ಲಾರಿಯಿಂದ ಬೊಲೊರೊ ವಾಹನಕ್ಕೆ ಸ್ಫೋಟಕ ಸರಬರಾಜು ಮಾಡುವಾಗ ಸ್ಫೋಟ ಸಂಭವಿಸಿತ್ತು. ಘಟನೆಯಿಂದ ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದರು. ಸ್ಫೋಟದ ತೀವ್ರತೆಗೆ ಹುಣಸೋಡು ಸನಿಹದ ಮನೆಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದವು. ಅಲ್ಲದೆ, ಹುಣಸೋಡು ಗ್ರಾಮದಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದವು.

ಹುಣಸೋಡು ಸ್ಫೋಟ ಪ್ರಕರಣದ ಕೇಸ್ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು. ಆದರೆ, ಪ್ರಕರಣ ಸಿಇಎನ್ ಠಾಣೆಗೆ ವರ್ಗಾಯಿಸಲಾಗಿತ್ತು. ಇದರಲ್ಲಿ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಪ್ರಕರಣದ ಎ2 ಆರೋಪಿಸಿ ಮಂಜುನಾಥ್ ಸಾಯಿ ಹಾಗೂ ಪೃಥ್ವಿನಾಥ್ ಸಾಯಿ ಸಹೋದರರು ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು. ಸಿಇಎನ್ ಠಾಣೆಯ ಜವಾಬ್ದಾರಿಗಳೇನು ಎಂಬುದನ್ನು ಇಲಾಖೆಯ ಸ್ಟಾಂಡಿಂಗ್ ಆರ್ಡರ್ನಲ್ಲಿ ಉಲ್ಲೇಖಿಸಲಾಗಿದೆ. ಹುಣಸೋಡು ಸ್ಫೋಟ ಪ್ರಕರಣದ ತನಿಖೆಯನ್ನು ಮೊದಲು ಠಾಣಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಬೇಕಿತ್ತು. ಆದರೆ, ಗಂಭೀರ ಪ್ರಕರಣವನ್ನು ವ್ಯಾಪ್ತಿಗೆ ಒಳಪಡದ ಸಿಇಎನ್ ಠಾಣೆಯ ತನಿಖಾಧಿಕಾರಿಯಿಂದ ನಡೆಸಲು ಅಂದಿನ ಐಜಿ ರವಿಯವರು ಸ್ಟಾಂಡಿಂಗ್ ಆರ್ಡರ್ ಮಾಡಿದ್ದರು. ಅದರಂತೆ ಸಿಇಎನ್ ಠಾಣೆಗೆ ಕೇಸ್ ವರ್ಗಾಯಿಸಲ್ಪಟ್ಟಿದ್ದು, ಪೊಲೀಸರು ತನಿಖೆ ನಡೆಸಿ ಚಾರ್ಚ್ ಶೀಟ್ ಸಲ್ಲಿಸಿದ್ದರು.

ಹುಣಸೋಡು ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಆಂಧ್ರ ಪ್ರದೇಶದ ಮಂಜುನಾಥ್ ಸಾಯಿ ತನಿಖೆಯ ವಿಧಾನವನ್ನೇ ಪ್ರಶ್ನಿಸಿ ಹೈಕೋರ್ಟ್ ನಲ್ಲಿ 2022ರ ನವೆಂಬರ್ ನಲ್ಲಿ ಅರ್ಜಿ ಸಲ್ಲಿಸಿ ಕೇಸ್ ವಜಾಗೊಳಿಸುವಂತೆ ಕೋರಿದ್ದ. ಪ್ರಕರಣದ ತನಿಖೆಯನ್ನು ಸಿಐಡಿ ಅಥವಾ ಸಿಒಡಿಗೆ ನೀಡದೆ ಸ್ಥಳೀಯ ಮಟ್ಟದಲ್ಲಿ ತನಿಖೆ ನಡೆಸಿ ಪ್ರಭಾವಿಗಳನ್ನು ಉಳಿಸಲು ಹೊರಟಿದ್ದೀರಿ, ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಸಿಇಎನ್ ಠಾಣೆಗೆ ಕೇಸ್ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಮಂಜುನಾಥ್ ಸಾಯಿ ಕೇಸ್ ವಜಾಗೊಳಿಸುವಂತೆ ಕೋರಿದ್ದ.

ಹೈಕೋರ್ಟ್ ನಲ್ಲಿ ಸಿಇಎನ್ ಠಾಣೆಯ ಬಗ್ಗೆ ಸಲ್ಲಿಸಿದ ರಿಟ್ ಅರ್ಜಿಯನ್ನು ಕೂಲಂಕಶವಾಗಿ ಪರಿಶೀಲಿಸಿದ ನ್ಯಾಯಾಧೀಶರು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ, ಸಂಬಂಧಿಸಿದ ದಾಖಲೆ ಕೇಳಿದ್ದರು. ಆದರೆ, ಸರಕಾರದ ಬಳಿ ಸಿಇಎನ್ ಠಾಣೆಗೆ ಆದೇಶ ಮಾಡಿರುವ ದಾಖಲೆಗಳು ಪೂರಕವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಇಎನ್ ಠಾಣೆಯ ಚಾರ್ಚ್ ಶೀಟ್ ವಜಾಗೊಳಿಸಿದ ಹೈಕೋರ್ಟ್ ನ್ಯಾಯಾಧೀಶರು, ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಮರು ತನಿಖೆ ನಡೆಸಿ ಚಾರ್ಚ್ಶೀಟ್ ಸಲ್ಲಿಸುವಂತೆ ಆದೇಶಿಸಿದ್ದಾರೆ .

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News