ಶಿವಮೊಗ್ಗ | ಗಲಾಟೆ ಮಾಡದಂತೆ ಬುದ್ದಿವಾದ ಹೇಳಿದ ಹಿನ್ನೆಲೆ; ಯುವಕರ ತಂಡದಿಂದ ಮೂವರ ಮೇಲೆ ಹಲ್ಲೆ
ಶಿವಮೊಗ್ಗ: ಮನೆಯ ಮುಂದಿರುವ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ ಯುವಕರ ಗುಂಪಿಗೆ ಇಲ್ಲಿ ಗಲಾಟೆ ಮಾಡಬೇಡಿ ಎಂದು ಬುದ್ದಿವಾದ ಹೇಳಿದ್ದಕ್ಕೆ 15 ಮಂದಿ ಯುವಕರ ಗುಂಪು ಮೂವರ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಗೋಪಾಳದ ಕೊರಮರ ಕೇರಿಯಲ್ಲಿ ನಡೆದಿದೆ.
15 ಮಂದಿ ಇದ್ದ ಯುವಕರ ಗುಂಪು ಯಾರನ್ನೋ ಹುಡುಕುತ್ತಾ ಗಲಾಟೆ ಮಾಡಲು ಶುರು ಮಾಡಿತ್ತು. ಈ ವೇಳೆ ತಿಮ್ಮೇಶ್ ಎನ್ನುವವರು ಗಲಾಟೆ ಮಾಡಬೇಡಿ ಇಲ್ಲಿಂದ ಹೋಗಿ ಎಂದು ಯುವಕರಿಗೆ ಬುದ್ಧಿ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಯುವಕರು ತಿಮ್ಮೇಶ್ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ. ಈ ವೇಳೆ ಬಿಡಿಸಲು ಬಂದ ತಿಮ್ಮಪ್ಪ ಅವರ ಮಗ ದರ್ಶನ್ ಹಾಗೂ ಮನು ಎಂಬುವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ದುಷ್ಕರ್ಮಿಗಳು ದರ್ಶನ್ನ ತೋಳಿನ ಭಾಗಕ್ಕೆ ಮಾರಕಾಸ್ತ್ರದಿಂದ ಇರಿದಿದ್ದು, ಮತ್ತೊಬ್ಬ ಯುವಕ ಮನು ಎಂಬಾತನ ಮೇಲೂ ಹಲ್ಲೆ ನಡೆಸಿದ್ದಾನೆ. ತಂದೆ ಮಕ್ಕಳು ಸೇರಿದಂತೆ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ತುಂಗಾನಗರ ಪೊಲೀಸರು ಧಾವಿಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ. ಹಲ್ಲೆ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.