ಶಿವಮೊಗ್ಗ ದಸರಾಕ್ಕೆ ಅಧಿಕೃತ ಚಾಲನೆ

Update: 2023-10-15 13:31 GMT

ಶಿವಮೊಗ್ಗ(ಅ.15): ವೈಭವದ ದಸರಾ ಆಚರಣೆಯಲ್ಲಿ ಹೆಸರಾಗಿರುವ ಶಿವಮೊಗ್ಗ ದಸರಾಕ್ಕೆ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ವೈಜಯಂತಿ ಕಾಶಿ ಭಾನುವಾರ ಚಾಲನೆ ನೀಡಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅ.15ರಿಂದ 23ರವರೆಗೆ ನಡೆಯುವ ವೈಭವಯುತ ದಸರಾವನ್ನು ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ವೈಜಯಂತಿ ಕಾಶಿ, ಉತ್ಸವಗಳಿಂದ ಜನರ ಉತ್ಸಾಹ ಹೆಚ್ಚಾಗುತ್ತವೆ. ಉತ್ಸಾಹವನ್ನು ಹೆಚ್ಚಿಸಿಕೊಂಡು ಹಬ್ಬಗಳನ್ನು ಸಡಗರ ಸಂಭ್ರಮದಿಂದ ಬರಮಾಡಿಕೊಂಡು ಆಚರಿಸಬೇಕು ಎಂದು ತಿಳಿಸಿದರು.

ಕತ್ತಲೆ ದೂರ ಮಾಡಲು ನವರಾತ್ರಿ ಸಂದರ್ಭದಲ್ಲಿ ತಲಾ ಮೂರು ದಿನ ಸರಸ್ವತಿ, ಲಕ್ಷ್ಮೀ ಮತ್ತು ದುರ್ಗೆಯರ ಪೂಜೆ ಮಾಡಲಾಗುತ್ತಿದೆ. ವಿಶೇಷವಾಗಿ ದುರ್ಗಾದೇವಿ ಆರಾಧಿಸುವುದರಿಂದ ಮನುಷ್ಯನ ಶಕ್ತಿ ಇಮ್ಮಡಿಗೊಳ್ಳಲಿದೆ. ಪೂಜೆ-ಪುನಸ್ಕಾರಗಳಿಂದ ಮನಃಶಾಂತಿ ಜತೆಗೆ ಅಪಾರ ಶಕ್ತಿಯು ವೃದ್ಧಿಸುತ್ತದೆ. ಈ ಹಬ್ಬದ ಮೂಲಕ ನಮ್ಮಲ್ಲಿರುವ ಋಣಾತ್ಮಕ ಶಕ್ತಿಯನ್ನ ಕಳೆದುಕೊಳ್ಳೋಣ ಎಂದು ಕರೆ ನೀಡಿದರು.

ದಸರಾ ಸಂದರ್ಭದಲ್ಲಿ ಸಮಾಜದ ಉದ್ಧಾರಕ್ಕಾಗಿ ನವರಾತ್ರಿಯೂ ದೇವಿಯರ ಆರಾಧಿಸಬೇಕಾಗುತ್ತದೆ.

ಜೀವನದಲ್ಲಿ ಕಲಿಕೆ ಮುಖ್ಯ. ಕಲಿಕೆಯು ಮನುಷ್ಯರಲ್ಲಿರುವ ಜೀವನ ಶೈಲಿಯನ್ನು ಬದಲಿಸುತ್ತವೆ. ಚಿನ್ನಾಭರಣ, ಹಣ ನಿಜವಾದ ಸಂಪತ್ತು ಅಲ್ಲ. ನಿಸರ್ಗ ಎಂಬುದು ನಿಜವಾದ ಸಂಪತ್ತು. ಈ ನಿಸರ್ಗಕ್ಕೆ ಸರಿಸಾಟಿ ಎಂಬುದು ಯಾವುದೂ ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈಜಯಂತಿ ಕಾಶಿ ಸುಮಂಗಳಿಯರಿಗೆ ಬಾಗಿನ ಅರ್ಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ದೇವಾಲಯದ ಆವರಣದಲ್ಲಿ ದೇವಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಭಾಗಿಯಾಗಿದ್ದವು.

ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಮಹಾನಗರ ಪಾಲಿಕೆ ಮೇಯರ್‌ ಎಸ್‌.ಶಿವಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News