ಶಿವಮೊಗ್ಗ: ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣ; ನಂತರದ ಬೆಳವಣಿಗೆಗಳು, ರಾಜಕಾರಣ, ಲಾಭಕ್ಕಾಗಿ ಹವಣಿಕೆ

Update: 2023-10-04 15:25 GMT

ಶಿವಮೊಗ್ಗ: ಪ್ರಕೃತಿ ಸೌಂದರ್ಯದ ಸ್ವರ್ಗವಾಗಿರುವ ರಾಗಿಗುಡ್ಡ ಕಳೆದ ಹಲವು ವರ್ಷಗಳಿಂದೀಚೇಗೆ ಅತಿ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಳ್ಳುತ್ತಿದೆ. ಸಣ್ಣ ವಿಚಾರಗಳಿಗೂ ರಾಗಿಗುಡ್ಡ ದೊಡ್ಡ ಸುದ್ದಿಯಾಗುತ್ತಿದೆ. ರಾಗಿಗುಡ್ಡದಲ್ಲಿ ನಡೆದ ಗಲಭೆಯ ವಾಸ್ತವವೇನು? ಘಟನೆ ಕುರಿತು ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆಯೇ ಎಂಬುವುದರ ಕುರಿತ ವಿವರವಾದ ಲೇಖನ ಇಲ್ಲಿದೆ…

ರಾಗಿಗುಡ್ಡ ಘಟನೆಯ ವಾಸ್ತವವೇನು?:

ಈ ಬಾರಿ ಗಣಪತಿ ಹಬ್ಬ ಹಾಗೂ ಮೀಲಾದುನ್ನಬಿ ಒಂದೇ ದಿನ ಬಂದಿದ್ದರಿಂದ ಜಿಲ್ಲಾಡಳಿತ ಎರಡು ಸಮುದಾಯಗಳ ಮುಖಂಡರುಗಳ ಜೊತೆ ಶಾಂತಿ ಸಭೆ ನಡೆಸಿ ಸೆ.28 ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗೆ ಅವಕಾಶ ನೀಡಿತು. ಸೆ.30 ರಂದು ಓಂ ಗಣಪತಿ ಮೆರವಣಿಗೆ ಹಾಗೂ ಅ.01 ರಂದು ಮೀಲಾದುನ್ನಬಿ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗಿತ್ತು. ಶಾಂತಿ ಸಭೆಯ ನಿರ್ಣಯದಂತೆ ಮುಸ್ಲಿಮರು ನಗರವನ್ನು ಸಿಂಗಾರಗೊಳಿಸಿದ್ದರು. ಮೆರವಣಿಗೆಗೆ ಸಕಲ ಸಿದ್ದತೆ ನಡೆದಿತ್ತು. ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಟಿಪ್ಪುವಿನ ಭಾವಚಿತ್ರ ಹಾಗೂ ತಲ್ವಾರ್‌ನ ಪ್ರತಿಕೃತಿಯನ್ನು ಪ್ರದರ್ಶಿಸಿದ್ದರು.

ಅಂದಿನ ದಿನ ಅಂದರೆ ಅ.01ರಂದು ಗಾಂಧಿ ಬಜಾರ್‌ನ ಜಾಮಿಯಾ ಮಸೀದಿಯಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ಹಲವೆಡೆ ಶಾಂತಿಯುತವಾಗಿ ಮೆರವಣಿಗೆ ನಡೆದಿದೆ. ಎಲ್ಲಿಯೂ ಸಣ್ಣ ಗಲಾಟೆಯೂ ಆಗಿರಲಿಲ್ಲ.

ಆದರೆ ಕೋಮುಸೂಕ್ಷ್ಮ ಪ್ರದೇಶವಾದ ರಾಗಿಗುಡ್ಡದಲ್ಲಿ ಟಿಪ್ಪು ಸುಲ್ತಾನ್ ವಿವಾದ್ಮಾತಕ ಕಟೌಟ್ ಒಂದು ಹಾಕಲಾಗಿತ್ತು. ಇದಕ್ಕೆ ಒಂದು ಕೋಮಿನವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರದ ಸೂಕ್ಷ್ಮತೆ ಗಮನಿಸಿದ ಪೊಲೀಸರು ಮುಸ್ಲಿಂ ಸಮಾಜದ ಹಿರಿಯರ ಜೊತೆ ಮಾತನಾಡಿ ರಾತ್ರೋರಾತ್ರಿ ಟಿಪ್ಪುವಿನ ಕಟೌಟ್ ಗೆ ಬಿಳಿ ಬಣ್ಣ ಬಳಿಸಿದ್ದರು. ಈ ವಿಚಾರ ತಿಳಿದು ಕಟೌಟ್ ಹಾಕಿದವರು ಪ್ರತಿಭಟನೆ ನಡೆಸಿದರು. ನಂತರ ಎಸ್ಪಿ ಮಿಥುನ್ ಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಗೊಂದಲಕ್ಕೆ ತೆರೆ ಎಳೆದಿದ್ದರು. ಶಾಂತಿಯುತ ಮೆರವಣಿಗೆ ನಡೆಸುವಂತೆ ಮನವಿ ಮಾಡಿದ್ದರು.

ಮೀಲಾದುನ್ನಬಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಆರೋಪ ರಾಗಿಗುಡ್ಡ ಪ್ರದೇಶವನ್ನು ಕೆಲಕಾಲ ಉದ್ವಿಗ್ನ ಗೊಳಿಸಿತು. ಈ ಸಂದರ್ಭ ಕಲ್ಲು ತೂರಾಟ ನಡೆದಿದ್ದು, ಅಪಾರ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಪೊಲೀಸರ ಮೇಲೂ ಉದ್ರಿಕ್ತರು ಕಲ್ಲು ತೂರಿದರು ಎಂದು ಆರೋಪಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಗಲಭೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಹಲವರನ್ನು ಚಿಕಿತ್ಸೆಗಾಗಿ ನಗರದ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿತ್ತು.

 



ಘಟನೆ ನಡೆದ ಒಂದು ತಾಸಿನ ಒಳಗೆ ರಾಗಿಗುಡ್ಡ ಪ್ರದೇಶವನ್ನು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಆರ್‌ಎಎಫ್ ಕಂಪನಿ, ಕೆಎಸ್‌ಆರ್‌ಪಿ ಹಾಗೂ ಡಿಎಆರ್ ತುಕಡಿ ಹಾಗೂ ಹೆಚ್ಚುವರಿಗೆ ಪೊಲೀಸರನ್ನು ನಿಯೋಜಿಸಲಾಯಿತು. ಎಸ್ಪಿ ಮಿಥುನ್ ಕುಮಾರ್ ಅವರು ರಾಗಿಗುಡ್ಡಕ್ಕೆ ಸೀಮಿತವಾಗಿ ಸೆಕ್ಷನ್ 144 ನಿಷೇದಾಜ್ಙೆ ಜಾರಿಗೊಳಿಸಿದರು. ಸ್ಥಳಕ್ಕೆ ಬಂದ ಎಡಿಜಿಪಿ ಹಿತೇಂದ್ರ ಕುಮಾರ್ ಹಾಗೂ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಅವರು ಅಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದುಕೊಂಡರು. ನಂತರ ಜಿಲ್ಲಾಧಿಕಾರಿಗಳು ನಗರದಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಆದೇಶಿಸಿದ್ದಾರೆ. ಸದ್ಯ ಶಿವಮೊಗ್ಗ ಶಾಂತವಾಗಿದೆ.

ಗಲಭೆಕೋರರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಮೂರ ತಂಡಗಳನ್ನು ರಚಿಸಲಾಯಿತು. ಗಲಭೆಯಲ್ಲಿ ಭಾಗಿಯಾದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ 24 ಎಫ್ ಐಅರ್ ದಾಖಲಿಸಿಕೊಂಡು 60 ಜನರನ್ನು ವಶಕ್ಕೆ ಪಡೆಯಲಾಗಿದೆ.

ರಾಜಕೀಯ ಲಾಭಕ್ಕಾಗಿ ನಾಯಕರ ಹೇಳಿಕೆ:

ರಾಗಿಗುಡ್ಡದಲ್ಲಿ ನಡೆದ ಸಣ್ಣ ಘಟನೆಯನ್ನು ಮಾಧ್ಯಮಗಳು ಶಿವಮೊಗ್ಗ ಕೊತ ಕೊತ, ಧಗಧಗ, ನಿಗಿ ನಿಗಿ ಕೆಂಡ ಎಂಬ ತಲೆಬರಹದಡಿಯಲ್ಲಿ ಸುದ್ದಿಗಳನ್ನು ಪ್ರಸಾರ ಮಾಡಿದರು. ವಿರೋಧ ಪಕ್ಷ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡಲಾರಂಭಿಸಿದರು. ಬಿಜೆಪಿ ನಾಯಕರು ರಾಗಿಗುಡ್ಡದ ಗಲಭೆ ಹಿಂದೆ ಮತಾಂಧ ಶಕ್ತಿಗಳ ಕೈವಾಡವಿದೆ. ದುಷ್ಕೃತ್ಯಕ್ಕೆ ಹೊರಗಿನವರು ಕಾರಣ, ತಲ್ವಾರ್ ಹಿಡಿದು ಹಿಂದೂ ಸಮಾಜಕ್ಕೂ ಉತ್ತರ ಕೊಡಲು ಬರುತ್ತೆ ಎಂದು ಪ್ರಚೋದನಕಾರಿ ಹೇಳಿಕೆಗಳು ನೀಡುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಶಿವಮೊಗ್ಗದ ರಾಗಿಗುಡ್ಡ ಗಲಭೆ ಕುರಿತು ಪ್ರತಿಕ್ರಿಯಿಸಿ, ಶಿವಮೊಗ್ಗದಲ್ಲಿ ಮೀಲಾದುನ್ನಬಿ ಮೆರವಣಿಗೆ ವೇಳೆ ನಡೆದ ಸಂಘರ್ಷ ಖಂಡನೀಯ. ಹಿಂದೂಗಳ ಅಂಗಡಿ, ಮನೆಗಳ ಮೇಲೆ ದಾಳಿಯಾಗಿದೆ. ಇದರ ಹಿಂದೆ ಮತಾಂಧ ಶಕ್ತಿಗಳ ಕೈವಾಡ ಇದೆ. ಇದು ಸರ್ಕಾರದ ಪೂರ್ಣ ವೈಫಲ್ಯ. ಇದರ ಸಂಪೂರ್ಣ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ತನಿಖೆ ಪ್ರಗತಿಯಲ್ಲಿರುವಾಗಲೇ ಮತಾಂಧ ಶಕ್ತಿಗಳ ಕೈವಾಡವಿದೆ ಎಂಬ ಹೇಳಿಕೆ ನೀಡಿರುವುದು ವಿಪರ್ಯಾಸ.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಖುದ್ದು ಸ್ಥಳಕ್ಕೆ ಭೇಟಿ ನೀಡಿಲ್ಲ. ಗಲಭೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ್ದು ಬಿಟ್ಟರೆ ಘಟನೆಗೆ ಕಾರಣ ಏನು ಎಂದು ತಿಳಿಯದೇ ಏಟಿಗೆ ಎದಿರೇಟು ಕೊಡುವ ಹಾಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಮೆರವಣಿಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಹೋಗುತ್ತಾರೆ. ಯಾರಿಗೆ ಎಚ್ಚರ ಅದು. ಹಿಂದೂ ಸಮಾಜಕ್ಕಾ? ತಲ್ವಾರ್ ಗೆ ತಲ್ವಾರ್ ಹಿಡಿದು, ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತ”ದೆ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಇನ್ನು ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್ ಚನ್ನ ಬಸಪ್ಪನವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡ ಅವರು, “ನಗರಕ್ಕೆ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧೆಡೆಗಳಿಂದ ವಾಹನಗಳು ಬಂದಿರುವ ಬಗ್ಗೆ ಸ್ಥಳೀಯರು ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಲ್ಲು ತೂರಾಟಕ್ಕೂ ಇವರ ನಡುವೆ ಸಂಬಂಧವಿದೆಯೇ ಎಂಬ ಅನುಮಾನ ಕಾಡುತ್ತಿದೆ” ಎಂದು ಹೇಳುವ ಮೂಲಕ ಗಲಭೆಗೆ ಹೊರಗಿನವರ ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿದ್ದಾರೆ.

ಕೋಲಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ, "ಔರಂಗಜೇಬ್ ಮತಾಂತರದ ಉದ್ದೇಶ ಇಟ್ಟುಕೊಂಡಿದ್ದವನು. ಸನಾತನ ಧರ್ಮ, ಭಾರತೀಯತೆ ನಾಶ ಮಾಡುವುದು ಔರಂಗಜೇಬ್ ಉದ್ದೇಶ. ಇಂತಹ ಉದ್ದೇಶಕ್ಕೆ ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ಅವಕಾಶ ಕೊಟ್ಟಿದೆ. ಗಲಭೆ ಪೂರ್ವ ನಿಯೋಜಿತವಾಗಿದ್ದು, ಘಜವಾಹಿಂದ್ ಅಜೆಂಡಾ ಇಟ್ಟುಕೊಂಡು ಗಲಭೆ ಮಾಡಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.

ಕೆಲವು ಕಿಡಿಗೇಡಿಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ನೀಡದೇ, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೇಳಿಕೆ ನೀಡಬೇಕಾದ ರಾಜಕಾರಣಿಗಳು ಕೋಮುಬಣ್ಣ ಕಟ್ಟಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.

ರಾಗಿಗುಡ್ಡಕ್ಕೆ ಬಿಜೆಪಿ ಸತ್ಯಶೋಧನ ಸಮಿತಿ:

ರಾಗಿಗುಡ್ಡದಲ್ಲಿ ನಡೆದ ಗಲಭೆ ಕುರಿತು ಸತ್ಯ ಶೋಧನೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‌ಕುಮಾರ್ ಕಟೀಲ್ ನೇತೃತ್ವದ ತಂಡ ಗುರುವಾರ ಆಗಮಿಸಲಿದೆ. ನಳಿನ್‌ಕುಮಾರ್ ಕಟೀಲ್ ನೇತೃತ್ವದ ಈ ತಂಡದಲ್ಲಿ ಕೆ.ಎಸ್.ಈಶ್ವರಪ್ಪ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಆರಗ ಜ್ಞಾನೇಂದ್ರ, ಬಿ.ವೈ. ರಾಘವೇಂದ್ರ, ಎನ್.ರವಿಕುಮಾರ್, ಚನ್ನಬಸಪ್ಪ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಭಾರತಿ ಶೆಟ್ಟಿ ಇರಲಿದ್ದಾರೆ.

ಬಿಜೆಪಿಗೆ ಲಾಭವಾಯ್ತಾ ಗಲಾಟೆ?:

ರಾಗಿಗುಡ್ಡದ ಗಲಾಟೆ ಬಿಜೆಪಿ ಪಾಲಿಗೆ ಹಬ್ಬದ ಊಟ ಸಿಕ್ಕಿದ ಹಾಗೆ ಆಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಒಂದು ಕೋಮಿನ ಬಾಹುಳ್ಯವಿರುವ ರಾಗಿಗುಡ್ಡದಲ್ಲಿ ನಡೆದ ಗಲಾಟೆಯ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ.

ಶಿವಮೊಗ್ಗ ಮೀಲಾದುನ್ನಬಿ ಮೆರವಣಿಗೆ ಸಂದರ್ಭದಲ್ಲಿ ನಿರ್ಮಿಸಿದ್ದ ತಲ್ವಾರ್ ಶೈಲಿ ಕಮಾನು ಹಾಗೂ ಟಿಪ್ಪು ಕಟೌಟ್ ನಿರ್ಮಿಸಿ ರಾಜ್ಯವನ್ನು ಟಿಪ್ಪು, ಔರಂಗಜೇಬನ ನಾಡಾಗಿಸಲು ರಾಜ್ಯ ಕಾಂಗ್ರೆಸ್ ಹೊರಟಿದೆ ಎಂದು ಬಿಜೆಪಿ ಕಿಡಿಕಾರಿದೆ.

ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ, “ಶಾಂತಿಯ ನಾಡಾಗಿದ್ದ ನಮ್ಮ ಕರ್ನಾಟಕವನ್ನು ಮತಾಂಧ ಟಿಪ್ಪು-ಔರಂಗಜೇಬನ ನಾಡನ್ನಾಗಿಸಲು ಹೊರಟಿದೆ ಕಾಂಗ್ರೆಸ್! ಕೋಲಾರದಲ್ಲಿ ತಲ್ವಾರ್ ಶೈಲಿಯ ಕಮಾನ್, ಕಟೌಟ್ ನಿರ್ಮಿಸಿ ಶಾಂತಿ ಕದಡುವ ಕೆಲಸ ಮಾಡಿದ್ದಾಯ್ತು, ಈಗ ಶಿವಮೊಗ್ಗದಲ್ಲಿ ಅದೇ ರೀತಿಯ ತಲ್ವಾರ್ ಕಮಾನ್, ಟಿಪ್ಪು ಕಟೌಟ್‌ಗಳನ್ನು ನಿರ್ಮಿಸಿ ಶಾಂತಿ ಕದಡುವ ಕೆಲಸ ನಡೆದಿದೆ” ಎಂದು ಆರೋಪಿಸಿದೆ.

“ವಿವಾದಾತ್ಮಕ ಕಟೌಟ್‌ಗಳನ್ನು ತೆರವುಗೊಳಿಸಿ ಎಂದು ಪೊಲೀಸರು ಹೇಳಿದರೂ, ಪೊಲೀಸರಿಗೆ ಬೆದರಿಕೆ ಹಾಕುತ್ತಾರೆಂದರೇ, ಆ ಪುಂಡರ ಹಿಂದಿರುವ ಶಕ್ತಿ ಕಾಂಗ್ರೆಸ್ ಸರ್ಕಾರವೇ ಹೊರತು ಮತ್ತಾರು ಅಲ್ಲ” ಎಂದು ಬಿಜೆಪಿ ಆರೋಪಿಸಿದೆ.

ಒಂದು ಕಡೆ ಬಿಜೆಪಿ ಟ್ವೀಟ್ ಮೂಲಕ ಸರ್ಕಾರವನ್ನು ಟೀಕಿಸಿದರೆ ಮತ್ತೊಂದೆಡೆ ಬಿಜೆಪಿ ನಾಯಕರು ಘಟನೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಮಂತಾಧ ಶಕ್ತಿಗಳ ಹಿಂದೆ ಸರ್ಕಾರದ ಕೈವಾಡವಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಈ ಗಲಾಟೆಯು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಲಾಭ ತಂದು ಕೊಡಲಿದೆಯೇ ಎಂಬ ಅನುಮಾನವಿದೆ.

ಮಾಧ್ಯಮಗಳ ಮೇಲಿನ ಆರೋಪ ಏನು?

ರಾಗಿಗುಡ್ಡದಲ್ಲಿ ಮೀಲಾದುನ್ನಬಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆಯನ್ನು ಬೆಂಗಳೂರಿನ ಕೆಜಿಹಳ್ಳಿ- ಡಿಜೆಹಳ್ಳಿ ಘಟನೆಗೆ ಹೋಲಿಕೆ ಮಾಡಿ ಮಾಧ್ಯಮಗಳು ಚರ್ಚೆ ನಡೆಸಿರುವುದು ಈ ಘಟನೆ ಇನ್ನಷ್ಟು ದೊಡ್ಡದಾಗಿ ಕಾಣಲು ಕಾರಣವಾಗಿದೆ.

ಕಲ್ಲು ತೂರಾಟದ ವಿಚಾರವನ್ನು ಧಗಧಗ, ಶಿವಮೊಗ್ಗ ಪ್ರಕ್ಷುಬ್ಧ, ನಿಗಿನಿಗಿ ಕೆಂಡ, ಕೊತಕೊತ ಎಂಬ ತಲೆಬರಹಗಳಡಿಯಲ್ಲಿ ಪ್ರಸಾರ ಮಾಡಿ ರಾಗಿಗುಡ್ಡದ ಕಲ್ಲು ತೂರಾಟ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಲಾಯಿತು. ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕಾಗದ ಮಾಧ್ಯಮಗಳು ಹೊಣೆಗಾರಿಕೆ ಮರೆತು ವರ್ತಿಸಿದವು.

ಸಮರ್ಥವಾಗಿ ಕೆಲಸ ಮಾಡುತ್ತಿರುವ ಪೊಲೀಸರು:

ರಾಗಿಗುಡ್ಡದ ಕಲ್ಲು ತೂರಾಟ ಪ್ರಕರಣ ಘಟನೆ ನಡೆದ ಒಂದು ತಾಸಿನೊಳಗೆ ಪೊಲೀಸರು ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಈ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಸಿಕೊಂಡಿರುವ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ಶರತ್ ಪುರದಾಳ್

contributor

Similar News