ಎಸ್ಸಿ, ಎಸ್ಟಿ ಹಾಸ್ಟೆಲ್‍ಗಳಲ್ಲಿ ಸಿಬ್ಬಂದಿ ಕೊರತೆ: ವರದಿ ಸಲ್ಲಿಕೆಗೆ ಹೈಕೋರ್ಟ್ ಸೂಚನೆ

Update: 2024-01-16 16:42 GMT

ಬೆಂಗಳೂರು: ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಸರಕಾರಿ ವಸತಿ ನಿಲಯಗಳಲ್ಲಿನ ವಾರ್ಡನ್ ಮತ್ತು ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವಿವರಣೆಯುಳ್ಳ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

ಎಸ್ಸಿ, ಎಸ್ಟಿ ಹಾಸ್ಟೆಲ್‍ಗಳಲ್ಲಿ ಸಿಬ್ಬಂದಿ ಕೊರತೆಯ ಕುರಿತಂತೆ ಮಾಧ್ಯಮಗಳ ವರದಿಯನ್ನು ಆಧರಿಸಿ, ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸ್ವಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಹಾಸ್ಟೆಲ್‍ಗಳಲ್ಲಿ ಸಿಬ್ಬಂದಿ ಕೊರತೆಯಿಂದ ಅಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ತೀವ್ರ ತೊಂದರೆಯಾಗಲಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ವಿಚಾರದಲ್ಲಿ ಸಿಬ್ಬಂದಿ ಕೊರತೆ ಕಳವಳಕಾರಿಯಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ವಿಚಾರಣೆ ವೇಳೆ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ(ನ್ಯಾಯಾಲಯಕ್ಕೆ ನೆರವಾಗುವವರು) ನಿತಿನ್ ರಮೇಶ್ ಹಾಜರಾಗಿ, ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ವಿವರಿಸಿದರು.

ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಪ್ರಕರಣದ ಅಮಿಕಸ್ ಕ್ಯೂರಿ ಅವರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಗಳ ಪ್ರಸ್ತಾಪ ಮಾಡಿದ್ದಾರೆ. ಆ ಬಗ್ಗೆ ಸರಕಾರ ಪ್ರತಿಕ್ರಿಯೆ ನೀಡಬೇಕಾಗಿದೆ. ಹೀಗಾಗಿ, ಸಮಗ್ರವಾದ ವಿವರಣೆಯುಳ್ಳ ಆಕ್ಷೇಪಣೆ ಸಲ್ಲಿಸಬೇಕು ಎಂದು ಸರಕಾರದ ವಕೀಲರಿಗೆ ತಿಳಿಸಿತು. ಅಲ್ಲದೇ, ಆ ಕುರಿತ ವರದಿಯನ್ನು ಅಮಿಕಸ್ ಕ್ಯೂರಿ ಅವರಿಗೆ ಒಂದು ಪ್ರತಿಯನ್ನು ಅರ್ಜಿ ವಿಚಾರಣೆಗೂ ಬರುವ ಮುನ್ನ ಸಲ್ಲಿಸಬೇಕು ಎಂದು ಪೀಠ ತಿಳಿಸಿತು.

ಅಲ್ಲದೇ, ರಾಜ್ಯದ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಸಮರೋಪಾದಿಯಲ್ಲಿ ಪ್ರಕ್ರಿಯೆ ಪ್ರಾರಂಭಿಸಿ ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಕಳೆದ ವರ್ಷ ಆದೇಶಿಸಲಾಗಿದೆ. ಈ ಸಂಬಂಧ ರಾಜ್ಯ ಸರಕಾರ ಗಮನ ಹರಿಸಬೇಕು ಎಂದು ಸೂಚನೆ ನೀಡಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News