ರಾಜ್ಯಗಳು ತಮ್ಮ ಪಾಲಿನ ಹಣಕ್ಕಾಗಿ ಕೇಂದ್ರದ ಎದುರು ಕೈಕಟ್ಟಿ ನಿಲ್ಲಬೇಕೆ?: ಕೃಷ್ಣ ಬೈರೇಗೌಡ

Update: 2024-01-20 15:06 GMT

ಬೆಂಗಳೂರು: ಕೇಂದ್ರಕ್ಕೆ ಹಣದ ಹಾಲು ಕರೆಯುವ ಎರಡನೇ ಅತಿದೊಡ್ಡ ರಾಜ್ಯ ಕರ್ನಾಟಕ. ಆದರೆ, ಇದೀಗ ನಮ್ಮ ಪಾಲಿನ ನ್ಯಾಯಯುತ ಹಣಕ್ಕೂ ಕೇಂದ್ರ ಸರಕಾರದ ಎದುರು ಕೈಕಟ್ಟಿ ನಿಲ್ಲುವಂತಹ ಸ್ಥಿತಿ ಎದುರಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಆರ್ಥಿಕ ಸಂಯುಕ್ತ ತತ್ವ: 16ನೆ ಹಣಕಾಸು ಆಯೋಗದ ಮುಂದಿರುವ ಸವಾಲುಗಳು’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯುಪಿಎ ಸರಕಾರದ ಅವಧಿಯಲ್ಲಿ ಜಾರಿಯಾದ 14ನೇ ಹಣಕಾಸು ಆಯೋಗವು ಕರ್ನಾಟದ ಆದಾಯದಲ್ಲಿ ಶೇ.42ರಷ್ಟು ಹಿಂತಿರುಗಿಸಲು ಸೂಚಿತ್ತು. ಈ ವೇಳೆ ಕರ್ನಾಟಕಕ್ಕೆ ಶೇ.33 ರಿಂದ ಶೇ.34ರಷ್ಟು ಹಣ ಲಭ್ಯವಾಗಿತ್ತು. ಆದರೆ, ಕಳೆದ 10 ವರ್ಷದ ಅವಧಿಯಲ್ಲಿ ಈ ಪ್ರಮಾಣ ಶೇ.28ಕ್ಕೆ ಇಳಿದಿದೆ. ಇದರಿಂದಾಗಿ ನಮ್ಮ ರಾಜ್ಯವು ಸಂಕಷ್ಟಕ್ಕೆ ಗುರಿಯಾಗಿದೆ ಎಂದು ಅವರು ಹೇಳಿದರು.

2019ರಲ್ಲಿ ಕೇಂದ್ರದ ಬಜೆಟ್ ಗಾತ್ರ 22 ಲಕ್ಷ ಕೋಟಿ ರೂ.ಇತ್ತು. ಆಗ ನಮಗೆ ತೆರಿಗೆ, ಅನುದಾನದ ಹೆಸರಿನಲ್ಲಿ 46 ಸಾವಿರ ಕೋಟಿ ರೂ.ನೀಡಲಾಗಿತ್ತು. 2023ರಲ್ಲಿ ಕೇಂದ್ರದ ಬಜೆಟ್ ಗಾತ್ರ 45 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಆದರೆ, ನಮಗೆ ಸಿಕ್ಕ ಪಾಲು 50 ಸಾವಿರ ಕೋಟಿ ರೂ. ಮಾತ್ರ ಎಂದು ಅವರು ತಿಳಿಸಿದರು.

ಜಿಎಸ್‍ಟಿ-ಸೆಸ್‍ನಲ್ಲೂ ರಾಜ್ಯಕ್ಕೆ ಅಪಾರ ನಷ್ಟ:

ಜಿಎಸ್‍ಟಿಗೂ ಮುಂಚೆ ರಾಜ್ಯದ ಆದಾಯ ವಾರ್ಷಿಕ ಶೇ.14 ರಿಂದ ಶೇ.16ರಷ್ಟಿತ್ತು. ಆದರೆ, ಈಗ ಶೇ.12ಕ್ಕೆ ಇಳಿದಿದೆ. ಇದರಿಂದಾಗಿ ರಾಜ್ಯದ ಜಿಡಿಪಿ ಇಳಿಮುಖವಾಗುತ್ತಿದೆ. ಸಮಾಜದಲ್ಲಿ ಹಣದ ಸಮಾನ ಹಂಚಿಕೆಯ ಪ್ರಮಾಣ ಶೇ.25 ರಷ್ಟು ಕುಸಿದಿದೆ. ಪರಿಣಾಮ ರಾಜ್ಯಕ್ಕೆ ಪ್ರತಿ ವರ್ಷ40 ರಿಂದ 50 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ ಎಂದು ಅವರು ವಿವರಿಸಿದರು.

2010ರಲ್ಲಿ ಶೇ.8 ರಿಂದ 10 ರಷ್ಟು ಆದಾಯ ಸೆಸ್ ಮೂಲಕ ಕೇಂದ್ರಕ್ಕೆ ಹರಿಯುತ್ತಿತ್ತು. ಈಗ ಶೇ.22ಕ್ಕೆ ಏರಿಕೆಯಾಗಿದೆ. ಇದರಲ್ಲಿ ರಾಜ್ಯಕ್ಕೆ ನಯಾಪೈಸೆ ಬರುತ್ತಿಲ್ಲ. ಕೇಂದ್ರ ಸರಕಾರ 2014 ರಿಂದ ತೈಲದ ಮೇಲಿನ ತೆರಿಗೆಯನ್ನೂ ಶೇ.50ರಷ್ಟು ಏರಿಸಿದೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿ ಇಳಿಸಿದ್ದ ಸಂದರ್ಭದಲ್ಲೂ ಕೇಂದ್ರ ಸರಕಾರ ತೆರಿಗೆಯನ್ನು ಮತ್ತಷ್ಟು ಏರಿಸಿತ್ತು ಎಂದು ಕೃಷ್ಣ ಬೈರೇಗೌಡ ಟೀಕಿಸಿದರು.

ಕೇಂದ್ರ ಸರಕಾರದ 2018-19ರ ಬಜೆಟ್‍ನಲ್ಲಿ ತೈಲ ಆದಾಯದ ಪ್ರಮಾಣ 2.18 ಲಕ್ಷ ಕೋಟಿ ರೂ.ಇತ್ತು. 2022-23ನೆ ಸಾಲಿನ ಬಜೆಟ್‍ನಲ್ಲಿ ಈ ಪ್ರಮಾಣ 5.15 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ರಾಜ್ಯ ಸರಕಾರಗಳಿಗೆ ತೈಲದ ಮೇಲಿನ ತೆರಿಗೆಯನ್ನು ಏರಿಸಲು ಅವಕಾಶವೇ ಸಿಕ್ಕಿಲ್ಲ ಎಂದು ಅವರು ವಿವರಿಸಿದರು.

ಸಂಸತ್‍ನಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯಕ್ಕೆ ಕುತ್ತು:

ಕೇಂದ್ರ ಸರಕಾರ 70-80ರ ದಶಕದಲ್ಲಿ ಜನಸಂಖ್ಯೆ ನಿಯಂತ್ರಣ ಅಭಿಯಾನಕ್ಕೆ ಕರೆ ನೀಡಿತ್ತು. ಅದರಂತೆ, ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಯಶಸ್ವಿಯಾಗಿ ಈ ಅಭಿಯಾನ ಜಾರಿಗೊಳಿಸಿತ್ತು. ಆದರೆ, ಬಿಹಾರ ಉತ್ತರಪ್ರದೇಶದಂತಹ ಉತ್ತರದ ರಾಜ್ಯಗಳು ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರಲಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಇದೀಗ ಜನಸಂಖ್ಯೆ ಆಧಾರದಲ್ಲಿ ಹೊಸ ಲೋಕಸಭಾ ಕ್ಷೇತ್ರಗಳನ್ನು ರಚಿಸುವ ಸೂಚನೆ ನೀಡಿದೆ. ಇದು ನಿಜವಾದರೆ, ಜನಸಂಖ್ಯೆ ನಿಯಂತ್ರಿಸಿದ್ದಕ್ಕಾಗಿ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ನೀಡಿದಂತಾಗುತ್ತದೆ. ಉತ್ತರದ ರಾಜ್ಯಗಳಲ್ಲಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳು ರಚನೆಯಾಗಲಿದ್ದು, ಸಂಸತ್‍ನಲ್ಲಿ ದಕ್ಷಿಣದ ರಾಜ್ಯಗಳಿಗೆ ದ್ವನಿಯೇ ಇಲ್ಲದೆ ಕತ್ತು ಹಿಸುಕುವ ಕೆಲಸವಾಗಲಿದೆ ಎಂದು ಕೃಷ್ಣ ಬೈರೇಗೌಡ ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News