ಫಲಪುಷ್ಪ ಪ್ರದರ್ಶನವು ಸಂವಿಧಾನದ ಆಶಯಗಳನ್ನರಿಯಲು ಅವಕಾಶ ಒದಗಿಸಿದೆ : ಸಿದ್ದರಾಮಯ್ಯ

Update: 2024-08-08 13:38 GMT

PC : x/@siddaramaiah

ಬೆಂಗಳೂರು : ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಎಂದೆಂದಿಗೂ ಪ್ರಸ್ತುತವಾಗಿದ್ದು, ಈ ಬಾರಿಯ ಫಲಪುಷ್ಪ ಪ್ರದರ್ಶನವು ಜನರು ಭಾರತೀಯ ಸಂವಿಧಾನ ಆಶಯಗಳನ್ನು ಅರಿಯಲು ಅಪೂರ್ವ ಅವಕಾಶ ಒದಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಇಲ್ಲಿನ ಲಾಲ್‍ಬಾಗ್‍ನಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಷಾಯಾಧಾರಿತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಜಾತಿ, ಧರ್ಮ, ಭಾಷೆ, ಪ್ರದೇಶಗಳಿಗೆ ಸೇರಿದ ಎಲ್ಲ ಜನರಿಗೂ ಸಮಾನ ಅವಕಾಶಗಳು ದೊರೆಯಬೇಕು. ಜನರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂಬುದರಲ್ಲಿ ಅಂಬೇಡ್ಕರ್ ನಂಬಿಕೆಯಿರಿಸಿದ್ದರು ಎಂದರು.

ಅಂಬೇಡ್ಕರ್ ಬಾಲ್ಯದಿಂದ ತಮ್ಮ ಜೀವಿತಾವಧಿಯಲ್ಲಿನ ಪ್ರಮುಖ ಸಾಧನೆಗಳನ್ನು ವಿವಿಧ ರೂಪದಲ್ಲಿ ಪ್ರದರ್ಶನದಲ್ಲಿ ಬಿಂಬಿಸಲಾಗಿದ್ದು, ಜನರು ಅವರ ಆಶಯಗಳ ಬಗ್ಗೆ ಅರಿಯಬಹುದಾಗಿದೆ. ಜನರು ಸಂವಿಧಾನದ ಬಗ್ಗೆ ಅರಿವು ಪಡೆದಾಗ ಮಾತ್ರ ಸಂವಿಧಾನದ ರೀತ್ಯ ನಡೆದುಕೊಳ್ಳಲು ಸಾಧ್ಯ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್‌ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ. ಅಂಬೇಡ್ಕರ್ ಎಂದೆಂದಿಗೂ ಪ್ರಸ್ತುತ ಎಂದು ಅವರು ತಿಳಿಸಿದರು.

ಭಾರತ ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಷಾಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಆ.8 ರಿಂದ 19 ವರೆಗೆ ಏರ್ಪಡಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್‌ಅವರ ಜೀವನಸಾಧನೆ, ದೇಶಕ್ಕೆ ನೀಡಿದ ಕೊಡುಗೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಬೌಧ ಮತ ಸ್ವೀಕಾರ, ಸಂವಿಧಾನ ರಚನಾ ಸಮಿತಿಯಲ್ಲಿ ಮಹತ್ವದ ಪಾತ್ರ, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಆಧರಿಸಿದ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಲಾಗಿದೆ ಎಂದರು.

 ತೋಟಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 12 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ವಿವಿಧ ತಳಿಗಳ ಸುಮಾರು 30 ಲಕ್ಷ ಹೂವುಗಳನ್ನು ಈ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News