ಸಿದ್ದರಾಮಯ್ಯ ಹಾಗೂ ಯತೀಂದ್ರ ಪಾಕಿಸ್ತಾನಕ್ಕೆ ಹೋಗಲಿ: ಕೆ.ಎಸ್. ಈಶ್ವರಪ್ಪ

Update: 2024-01-04 13:01 GMT

ಶಿವಮೊಗ್ಗ: ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಇಬ್ಬರು ಮತಾಂತರಗೊಂಡು ಪಾಕಿಸ್ತಾನಕ್ಕೆ ಹೋಗಲಿ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು.

ಹುಬ್ಬಳಿಯ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧಿಸಿರುವ ರಾಜ್ಯಸರ್ಕಾರದ ಧೋರಣೆ ಖಂಡಿಸಿ ನಗರ ಬಿಜೆಪಿ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

"ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ನುಡಿಮುತ್ತು ಉದುರಿಸಿದ್ದಾರೆ. ಭಾರತ ಹಿಂದೂ ರಾಷ್ಟ್ರ ಆಗಲ್ಲ ಅಂತ ಹೇಳಿದ್ದಾನೆ. ಹಾಗಿದ್ರೆ ಅಪ್ಪ ಮಗ ಪಾಕಿಸ್ತಾನಕ್ಕೆ ಹೋಗಲಿ" ಎಂದು ಈಶ್ವರಪ್ಪ ಹೇಳಿದರು.

ಹಿಜಾಬ್ ವಿಚಾರವಾಗಿ ನ್ಯಾಯಾಲಯ ನೀಡಿದ ಆದೇಶದ ಮೇಲೆ ನಂಬಿಕೆ ಇಲ್ಲ. ಹಿಂದೂ ಸಮಾಜಕ್ಕೆ ಹೆದರಿ ಸಿದ್ದರಾಮಯ್ಯ ಹಿಜಾಬ್ ಆದೇಶ ವಾಪಸ್ಸು ಪಡೆದಿದ್ದಾರೆ ಎಂದ ಅವರು, ಕರಸೇವಕ ಶ್ರೀಕಾಂತ್ ಪೂಜಾರಿ ಬಿಡುಗಡೆ ಆಗಬೇಕು. ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಮಾಡಿದ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಮತ್ತೊಮ್ಮೆ ಗೋದ್ರಾ ಹತ್ಯಾಕಾಂಡ ನಡೆಯಲಿದೆ ಎಂಬ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ದೇಶದ್ರೋಹಿ ಸಂಘಟನೆ ಪಿಎಫ್ ಐ ಜೊತೆ ಸಂಬಂಧ ಹೊಂದಿರುವ ಬಿ.ಕೆ ಹರಿಪ್ರಸಾದ್ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಚಾಲಕ ಎಂ.ಬಿ ಭಾನುಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರ ಕಾನೂನಿನ ದುರುಪಯೋಗಪಡಿಸಿಕೊಂಡು ಕರ ಸೇವಕರನ್ನು ಬಂಧಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಶ್ರೀರಾಮ ಈ ದೇಶದ ಅಸ್ಮಿತೆ ಎಂದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಂತ್ರಾಕ್ಷತೆಯ ಹೆಸರಲ್ಲಿ ಜನ ಸೇರುತ್ತಿರುವುದನ್ನು ಸಹಿಸದೇ ಕರ ಸೇವಕರನ್ನು ಬಂಧಿಸುತ್ತಿದೆ ಎಂದು ಆರೋಪಿಸಿದರು.

ಶಾಸಕ ಎಸ್.ಎನ್ ಚನ್ನಬಸಪ್ಪ ಮಾತನಾಡಿ, ಕರಸೇವೆಯಲ್ಲಿ ಭಾಗಿಯಾದವರನ್ನು ಹುಡುಕಿ ಹುಡುಕಿ ಬಂಧಿಸಲಾಗುತ್ತಿದೆ.ಕಾಂಗ್ರೆಸ್ ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್,ನಗರಾಧ್ಯಕ್ಷ ಜಗದೀಶ್ ಪ್ರಮುಖರಾದ ವಿಶ್ವಾಸ್,ಎಸ್.ದತ್ತಾತ್ರಿ,ಸಂತೋಷ್ ಬಳ್ಳಕೆರೆ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News