ಸಿದ್ದರಾಮಯ್ಯ ಸಚಿವ ಸಂಪುಟ ಕಳ್ಳರ ಗುಂಪಾಗಿದೆ: ಕೆಎಸ್ ಈಶ್ವರಪ್ಪ
ಶಿವಮೊಗ್ಗ: ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ದ ನಡೆಯುತ್ತಿರುವ ಸಿಬಿಐ ಕೇಸ್ ಅನ್ನು ಸಚಿವ ಸಂಪುಟ ವಾಪಸ್ ಪಡೆದುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ 135 ಸ್ಥಾನ ಬಂದಿದೆ ಅಂತಾ ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದಾರೆ.ಡಿ.ಕೆ ಶಿವಕುಮಾರ್ ಅವರದು 23 ಕೋಟಿ ಇದ್ದ ವರಮಾನ 163 ಕೋಟಿಗೆ ಹೆಚ್ಚಳವಾಗಿದೆ.ಹಾಗಾಗಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಿಬಿಐಗೆ ಕೊಟ್ಟಿದ್ದರು ಎಂದರು.
ಡಿಕೆಶಿ ನ್ಯಾಯಾಲಯಕ್ಕೆ ಹೋದರು ನ್ಯಾಯಾಲಯ ಅವರ ಅರ್ಜಿ ತಿರಸ್ಕಾರ ಮಾಡಿತ್ತು.ಇದು ಇಡೀ ದೇಶಕ್ಕೆ ಗೊತ್ತಿದೆ.ಸಿಬಿಐ ತನಿಖೆ ಅಂತಿಮ ಹಂತಕ್ಕೆ ಬಂದಿದೆ.ಇಂತಹ ಸಂದರ್ಭದಲ್ಲಿ" ಕೇಡಿ ಸಿದ್ದು ಸಚಿವ ಸಂಪುಟ ಕಳ್ಳರ ಗುಂಪಾಗಿದೆ.ಕೇಡಿ ಸಿದ್ದು ಅವರ ದರೋಡೆಕೋರರ ತಂಡ ದುರುಪಯೋಗ ಮಾಡಿಕೊಂಡಿದೆ " ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಗೃಹ ಸಚಿವರಾಗಿದ್ದ ಜಾರ್ಜ್ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು ನಂತರ ಸಚಿವ ಸಂಪುಟಕ್ಕೆ ಸೇರಿದರು.ನನ್ನ ಮೇಲೆ ಆಪಾದನೆ ಬಂತು ನಾನು ರಾಜೀನಾಮೆ ಕೊಟ್ಟೆ ಎಂದ ಅವರು, ಸಚಿವ ಸಂಪುಟ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊದಲ ವ್ಯಕ್ತಿ ಡಿ.ಕೆ ಶಿವಕುಮಾರ್ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರಿಗೆ ಖುರ್ಚಿ ಮುಖ್ಯವೇ ಹೊರತು ನ್ಯಾಯವಲ್ಲ.ಸಂವಿಧಾನದ ಬಗ್ಗೆ ಭಾಷಣ ಮಾಡುವ ನಾಯಕರಿಗೆ ಇದು ಗೊತ್ತಿಲ್ಲವೇ, ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು ಎಂದರು.
ದೇಶದಲ್ಲಿ ಕಾಂಗ್ರೆಸ್ ಅನ್ನು ಜನ ಕಿತ್ತು ಹಾಕಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ.ಮುಂದಿನ ಚುನಾವಣೆಯಲ್ಲಿ ಜನ ಬುದ್ದಿ ಕಲಿಸುತ್ತಾರೆ ಎಂದ ಅವರು, ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಡುತ್ತಿದೆ ಎಂದು ದೂರಿದರು.