ತನ್ನ ತಿರುಚಿದ ವಿಡಿಯೋ ಪೋಸ್ಟ್ ಮಾಡಿದ ಕೆಟಿಆರ್‌ಗೆ ಸಿದ್ದರಾಮಯ್ಯ ತಿರುಗೇಟು

Update: 2023-12-19 12:26 GMT

 ಸಿದ್ದರಾಮಯ್ಯ

ಬೆಂಗಳೂರು: ವೀಡಿಯೊವೊಂದನ್ನು ಶೇರ್‌ ಮಾಡಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಬಿಆರ್‌ಎಸ್‌ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ ಟಿ ರಾಮ ರಾವ್‌ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕೆ ಟಿ ರಾಮ ರಾವ್‌ ಅವರು ಶೇರ್‌ ಮಾಡಿರುವ ತಿರುಚಿದ ವೀಡಿಯೊವನ್ನು ಸಿಎಂ ಸಿದ್ದರಾಮಯ್ಯ ತಕ್ಷಣ ಮರುಟ್ವೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ಯಾವುದು ನಿಜ ಹಾಗೂ ಯಾವುದು ನಕಲಿ ಎಂದು ತಿಳಿಯಲು ವಿಫಲವಾಗಿರುವುದೇ ತೆಲಂಗಾಣದಲ್ಲಿ ಬಿಆರ್‌ಎಸ್‌ ವೈಫಲ್ಯಕ್ಕೆ ಕಾರಣವಾಗಿರಬಹುದೆಂದೂ ಸಿದ್ದರಾಮಯ್ಯ ಕುಟುಕಿದ್ದಾರೆ.

ಕೆ ಟಿ ರಾಮರಾವ್‌ ಒಂದು ವೀಡಿಯೊ ಪೋಸ್ಟ್‌ ಮಾಡಿ “ಚುನಾವಣಾ ಭರವಸೆಗಳು/ಗ್ಯಾರಂಟಿಗಳನ್ನು ಜಾರಿಗೊಳಿಸಲು ಹಣವಿಲ್ಲ ಎನ್ನುತ್ತಿದ್ದಾರೆ ಕರ್ನಾಟಕ ಸಿಎಂ! ಜನರನ್ನು ಯಶಸ್ವಿಯಾಗಿ ಚುನಾವಣೆಯಲ್ಲಿ ಮರುಳುಗೊಳಿಸಿ ತೆಲಂಗಾಣದಲ್ಲೂ ಹೀಗೆಯೇ ಮಾಡಲಾಗುವುದೇ? ದೊಡ್ಡ ದೊಡ್ಡ ಭರವಸೆಗಳನ್ನು ನೀಡುವ ಮುನ್ನ ಸಾಕಷ್ಟು ಅಧ್ಯಯನ ಮತ್ತು ಯೋಜನೆ ಹಾಕಿಕೊಳ್ಳುವುದು ಅಗತ್ಯವಲ್ಲವೇ?” ಎಂದು ಪೋಸ್ಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೆಟಿಆರ್‌ ಶೇರ್‌ ಮಾಡಿದ ವೀಡಿಯೊ ನಕಲಿ ಹಾಗೂ ಅದನ್ನು ಸುದ್ದಿ ಮಾಡಿದ್ದು ಬಿಜೆಪಿ ಎಂದು ಹೇಳಿದ್ದಾರೆ. ನಂತರ ಮೂಲ ವೀಡಿಯೊ ಕೂಡ ಪೋಸ್ಟ್‌ ಮಾಡಿದ ಸಿಎಂ ಸಿದ್ದರಾಮಯ್ಯ, ಮರು ಟ್ವೀಟ್ ಮಾಡಿದ್ದಾರೆ.

“ಕೆಟಿಆರ್‌ ಅವರೇ, ತೆಲಂಗಾಣ ಚುನಾವಣೆಯಲ್ಲಿ ನಿಮ್ಮ ಪಕ್ಷ ಏಕೆ ಸೋತಿತೆಂದು ನಿಮಗೆ ಗೊತ್ತೇ? ಯಾಕೆಂದರೆ ಯಾವುದು ನಕಲಿ ಮತ್ತು ತಿರುಚಲಾಗಿದೆ ಮತ್ತು ಯಾವುದು ಸತ್ಯ ಎಂದು ಪರಿಶೀಲಿಸಲೂ ನಿಮಗೆ ತಿಳಿಯುವುದಿಲ್ಲ. ಬಿಜೆಪಿ ಪಕ್ಷ ನಕಲಿ ತಿರುಚಿದ ವೀಡಿಯೊಗಳನ್ನು ಸಿದ್ಧಪಡಿಸುತ್ತದೆ. ನಿಮ್ಮ ಪಕ್ಷ ಅವುಗಳನ್ನು ಪ್ರಸಾರ ಮಾಡುತ್ತದೆ. ನಿಮ್ಮದು ಬಿಜೆಪಿಯ ಬಿ ಟೀಂ.” ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News