ಸಿದ್ದರಾಮಯ್ಯ ವಾಲ್ಮೀಕಿ ಜಯಂತಿ ದಿನವಾದ ಇಂದೇ ರಾಜೀನಾಮೆ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಿ: ಸದಾನಂದ ಗೌಡ

Update: 2024-10-17 10:41 GMT

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹರ್ಷಿ ವಾಲ್ಮೀಕಿ ಜಯಂತಿಯ ದಿನವಾದ ಇಂದೇ ರಾಜೀನಾಮೆ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಗ್ರಹಿಸಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾರ್ಜ್ ಶೀಟ್ ಸಿದ್ದರಾಮಯ್ಯರಿಗೆ ಜ್ಞಾನೋದಯಕ್ಕೆ ಒಂದು ದಾಖಲೆಯಂತಿದೆ ಎಂದು ಭಾವಿಸುವುದಾಗಿ ಹೇಳಿದರು.

ಚಾರ್ಜ್ ಶೀಟ್ ಪ್ರತಿಯನ್ನು ಪ್ರದರ್ಶನ ಮಾಡಿದ ಡಿವಿಎಸ್, ಯಾರೇ ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಾನೆ ಎಂಬುದನ್ನು ನ್ಯಾಯಾಂಗದ ತೀರ್ಪಿನ ಮುಖಾಂತರ ಬೈಲ್ ಅಪ್ಲಿಕೇಶನ್ ಆರ್ಡರ್ ನಲ್ಲಿ ತೋರಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರೇ ಇದು ಬಹಳ ಚೆನ್ನಾಗಿದೆ. ಮಧ್ಯಾಹ್ನದ ವರೆಗೆ ಓದಿ; ವಾಲ್ಮೀಕಿ ಜಯಂತಿಯ ದಿನ ಸಂಜೆ ರಾಜೀನಾಮೆ ಕೊಡಿ. ಆ ಮೂಲಕ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸಿ ಎಂದು ಒತ್ತಾಯಿಸಿದರು.

ಇ.ಡಿ. ಚಾರ್ಜ್ ಶೀಟಿನಲ್ಲಿ ಮಾಜಿ ಸಚಿವ ನಾಗೇಂದ್ರರಿಂದ ಕಾರು ಖರೀದಿ, ಕುಟುಂಬದ ವಿಮಾನ ಪ್ರಯಾಣದ ಟಿಕೆಟ್, ಪೆಟ್ರೋಲ್- ಡೀಸೆಲ್ ಖರೀದಿ, ಮನೆ ವಿದ್ಯುತ್ ಶುಲ್ಕ, ಮನೆ ಕೆಲಸದವರ ವೇತನ ಪಾವತಿಸಿದ್ದನ್ನು ಉಲ್ಲೇಖಿಸಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಚೂರು ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆ ಆಗಿರುವುದು ಜಾರ್ಜ್ಶೀಲಟ್ನಣಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.

ಬಳ್ಳಾರಿ ಲೋಕಸಭಾ ಚುನಾವಣೆಗೋಸ್ಕರ 3 ಶಾಸಕರ ಮೂಲಕ 14.80 ಕೋಟಿ ರೂ. ಬಳಕೆಯಾದುದು ಗೊತ್ತಾಗಿದೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಭರತ್ ರೆಡ್ಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಣೇಶ್, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ಅವರ ಮೂಲಕ ಸುಮಾರು 15 ಕೋಟಿ ರೂ. ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೆ ಲೋಕಸಭಾ ಚುನಾವಣೆಯಲ್ಲಿ ಕೆಲಸ ನಿರ್ವಹಿಸಲು ತಲಾ 10 ಸಾವಿರ ರೂ. ವೆಚ್ಚವನ್ನು ಮಾಡಿದ್ದಾರೆ. ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಣವನ್ನು ತೆಲಂಗಾಣ ಲೋಕಸಭಾ ಚುನಾವಣೆಗೂ ಉಪಯೋಗಿಸಿದ್ದಾರೆ ಎಂಬ ಅಂಶಗಳು ಗೊತ್ತಾಗಿವೆ ಎಂದು ಡಿವಿಎಸ್ ಆಪಾದಿಸಿದರು.

ಸಿದ್ದರಾಮಯ್ಯನವರು ಈಚಿನ ದಿನಗಳಲ್ಲಿ ತಮ್ಮ ಕಡೆಯಿಂದ ಏನೋ ತಪ್ಪಾಗಿದೆ ಎಂದು ಸಾಬೀತು ಪಡಿಸಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಸುಮಾರು 89 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಜನತಾ ನ್ಯಾಯಾಲಯ ವಿಧಾನಸಭೆಯಲ್ಲೇ ಅವರು ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದರು.

ಸಿದ್ದರಾಮಯ್ಯರಿಗೆ ಈಗ ಕಂಬಳಿ ಗುದ್ದು:

ಸಿದ್ದರಾಮಯ್ಯನವರು ರಾಜೀನಾಮೆ ಕೊಡದಿದ್ದರೆ ಬಹಳ ಕಷ್ಟ ಎಂಬ ಸ್ಥಿತಿ ರಾಜ್ಯದಲ್ಲಿದೆ. ದಿನನಿತ್ಯ ಒಂದೊಂದು ಡಜನ್ ಜನರು ಮಾನ್ಯ ರಾಜ್ಯಪಾಲರಲ್ಲಿಗೆ ಹೊಸ ದೂರಿನೊಂದಿಗೆ ಹೋಗುತ್ತಿದ್ದಾರೆ. ಸಿದ್ಧಾರ್ಥ ವಿಹಾರ ಟ್ರಸ್ಟ್ ಬಗ್ಗೆ, ವಕ್ಫ್ ಬೋರ್ಡ್ ಹಗರಣದ ಕುರಿತು, ಅರ್ಕಾವತಿ ವಿಚಾರದಲ್ಲಿ ಸಿದ್ದರಾಮಯ್ಯ ಮಾಡಿದ ಕರ್ಮಕಾಂಡವನ್ನು ಹೊರಕ್ಕೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸುತ್ತಿದ್ದಾರೆ. ಸಿದ್ದರಾಮಯ್ಯನವರು ರಾಜೀನಾಮೆ ನೀಡಿದರೆ ಇದರಿಂದ ಹೊರಕ್ಕೆ ಬರಬಹುದು ಎಂದು ಡಿ.ವಿ.ಸದಾನಂದಗೌಡ ಅವರು ತಿಳಿಸಿದರು.

ಹಳ್ಳಿಯಲ್ಲಿ ಒಂದು ಗಾದೆ ಇದೆ. ಕಂಬಳಿ ಗುದ್ದು ಹಾಕುವುದು ಎಂದು. ತಪ್ಪು ಮಾಡಿದ ವ್ಯಕ್ತಿಗೆ ಒಬ್ಬ ಕಂಬಳಿ ಹಾಕಿ ಮುಚ್ಚುತ್ತಾನೆ. ಪಕ್ಕದಲ್ಲಿರುವ ಎಲ್ಲರೂ ಬಂದು ಯಾರಿಗೂ ಗೊತ್ತಾಗದಂತೆ ಗುದ್ದು ಹಾಕುತ್ತಾರೆ. ಕರ್ನಾಟಕದಲ್ಲಿ ಈಗ ಸಿದ್ದರಾಮಯ್ಯನವರಿಗೆ ಕಂಬಳಿ ಗುದ್ದು ಬೀಳಲು ಆರಂಭವಾಗಿದೆ ಎಂದು ಡಿವಿಎಸ್ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ವಕ್ತಾರರಾದ ಡಾ.ನರೇಂದ್ರ ರಂಗಪ್ಪ, ಪ್ರಕಾಶ್ ಶೇಷರಾಘವಾಚಾರ್, ಎಚ್. ವೆಂಕಟೇಶ್ ದೊಡ್ಡೇರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News