ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೊದಲ ಆರೋಪಿ: ಆರ್. ಅಶೋಕ್ ಆರೋಪ

Update: 2024-06-10 14:15 GMT

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೊದಲ ಆರೋಪಿಯಾಗಿದ್ದು, ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದ ಹಿಂದೆ ಕೇವಲ ಬಿ.ನಾಗೇಂದ್ರ ಇಲ್ಲ. ಇದರ ಹಿಂದೆ ದೊಡ್ಡ ನಾಯಕರೇ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತಿದ್ದೇ ಈ ಹಗರಣ ನಡೆದಿದೆ. ಇದರ ಜೊತೆ ಇನ್ನಷ್ಟು ಸಚಿವರೂ ಸೇರಿದ್ದಾರೆ ಎಂದು ನುಡಿದರು.

‘ಸಿದ್ದರಾಮಯ್ಯನವರಿಗೆ ಆರ್ಥಿಕತೆಯ ಬಗ್ಗೆ ಗೊತ್ತಿದೆಯೇ? ಇಲಾಖೆಯ ಮೇಲೆ ಇವರಿಗೆ ಹಿಡಿತವಿಲ್ಲವೇ? ಈ ಹಣ ಹೈದರಾಬಾದ್‍ಗೆ ಹೋಗಿದ್ದು ತಿಳಿದರೂ ಬೇರೆಯವರ ವಿರುದ್ಧ ಕಠಿಣ ಕ್ರಮ ವಹಿಸಿಲ್ಲ. ದಲಿತರ ಹಣವನ್ನು ವಾಪಸ್ ಮಾಡದಿದ್ದರೆ ಜನರ ಶಾಪ ತಟ್ಟಲಿದೆ. ಈ ಅಕ್ರಮದಲ್ಲಿ ಮುಖ್ಯಮಂತ್ರಿಯೇ ಮೊದಲ ಆರೋಪಿಯಾಗಿದ್ದು, ಬಿಜೆಪಿಯ ಹೋರಾಟ ಮುಂದುವರಿಯಲಿದೆ’ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಬಂದಿಲ್ಲ. ಅಭಿವೃದ್ಧಿ ಶೂನ್ಯವಾಗಿರುವುದರಿಂದಲೇ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಸರಕಾರ ಮತಕ್ಕಾಗಿ ಗ್ಯಾರಂಟಿ ಜಾರಿ ಮಾಡಿದ್ದರಿಂದ ಈಗ ಸಾಲ ಮಾಡಿ ಸಂಬಳ ಕೊಡುವ ಸ್ಥಿತಿ ಬಂದಿದೆ. ಗ್ಯಾರಂಟಿಗಳಿಂದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಶಾಸಕರು ಅನುದಾನ ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಪಾಪರ್ ಆಗಿರುವ ಸರಕಾರ ಎಲ್ಲ ಕಡೆ ಬಿಲ್ ಪಾವತಿ ಬಾಕಿ ಇರಿಸಿಕೊಂಡಿದೆ ಎಂದು ದೂರಿದರು.

ಬಿಜೆಪಿ ಸರಕಾರವಿದ್ದಾಗ ಶಾಸಕರು ಶಾಲೆ, ಆಸ್ಪತ್ರೆ, ನೀರಾವರಿ ಯೋಜನೆ ತಂದರು. ಕಾಂಗ್ರೆಸ್‍ನ ಶಾಸಕರು ಏನೂ ತಂದಿಲ್ಲವೆಂದು ಜನರೇ ಹೀಯಾಳಿಸುತ್ತಿದ್ದಾರೆ. ಅಭಿವೃದ್ಧಿ ಇಲ್ಲದೆ ಜನರು ಶಾಸಕರು ಹಾಗೂ ಸಚಿವರ ಮಾತಿಗೆ ವಿರುದ್ಧವಾಗಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಅವರು ನುಡಿದರು.

ದಲಿತರ ಹಣ ಲೂಟಿ ಹೊಡೆದು, ಶೂನ್ಯ ಸಾಧನೆ ಮಾಡಿ, ಜನರ ಪಾಲಿಗೆ ಈ ಸರಕಾರ ಸತ್ತುಹೋಗಿದೆ. ಒಬ್ಬ ಸಚಿವರೂ ಮಳೆಹಾನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿಲ್ಲ. ಚುನಾವಣೆಯಲ್ಲಿ ಸಚಿವರಿರುವ ಕಡೆ ಹಿನ್ನೆಡೆಯಾಗಿದ್ದು, ಸ್ಥಾನ ಕಳೆದುಕೊಳ್ಳುವ ಆತಂಕವಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಹೀನಾಯವಾಗಿ ಸೋತಿದ್ದಾರೆ. ಸರಕಾರವಿದ್ದು, ಏಕೆ ಸೋತಿದ್ದೀರಿ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News